Kundapura: ಭಾರೀ ಮಳೆ, ನೆರೆ ಅವಾಂತರ-ದೇವಾಲಯಗಳಿಗೆ ನುಗ್ಗಿದ ನೆರೆ ನೀರು
ಕುಂದಾಪುರ: ಉಡುಪಿ ಜಿಲ್ಲೆಯಾದ್ಯಂತ ಅವಿರತವಾಗಿ ಸುರಿಯುತ್ತಿರುವ ಭಾರೀ ಮಳೆ ತಗ್ಗು ಪ್ರದೇಶಗಳನ್ನು ಜಲಾವೃತಗೊಳಿಸಿದೆ. ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿದ್ದು ನೀರಿನ ಪ್ರವಾಹದಿಂದ ರಸ್ತೆಗಳನ್ನು ಗುರುತಿಸುವುದೇ ಕಷ್ಟವಾಗಿದೆ.
ಬ್ರಹ್ಮಾವರ ತಾಲೂಕಿನ ಸಾಸ್ತಾನ ಕೆಳಬೆಟ್ಟು ಮೂಡಹಡು ಗ್ರಾಮದಲ್ಲಿ ಹರಿಯುವ ಸೀತಾ ನದಿ ಉಕ್ಕಿ ಹರಿದು, ದಡದಲ್ಲಿನ ಪವಾಡಗಳೊಡೆಯ ಕೊರಗಜ್ಜನ ಕ್ಷೇತ್ರವಾದ ಶ್ರೀ ಕ್ಷೇತ್ರ ಕಳಿಬೈಲು ದೇವಾಲಯಕ್ಕೆ ನುಗ್ಗಿದೆ. ಇದೊಂದು ಕೊರಗಜ್ಜನ ಮಹಿಮೆ ಎಂದೇ ಪರಿಗಣಿಸಿರುವ ಭಕ್ತರು ಸಾಗಿ ಬಂದ ಸೀತೆ ಅಮ್ಮನ ಪಾದ ತೋಯಿಸಿದಳು ಎಂದು ಪುಳಕಿತರಾಗಿದ್ದಾರೆ.
ಪ್ರತಿ ವರ್ಷವೂ ಮಳೆಗಾಲದಲ್ಲಿ ಸೀತೆ ಉಕ್ಕಿ ಹರಿದು ಕ್ಷೇತ್ರಕ್ಕೆ ಸಾಗಿ ಬರುವವಳು ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ಈ ವರ್ಷವೂ ಕೂಡ ಸೀತಾ ನದಿ ಹರಿದು ಬಂದು ಇಲ್ಲಿರುವ ಕಲ್ಲು ಹಾಗೂ ಅಮ್ಮನ ಪಾದವನ್ನು ತೊಳೆದಿದ್ದಾಳೆ ಎಂದು ಶ್ರೀ ಕಳಿಬೈಲು ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಪ್ರಧಾನ ಅರ್ಚಕರು ಹಾಗೂ ಸಂಚಾಲಕ ಅಭಿಜಿತ್ ಪಾಂಡೇಶ್ವರ ಹೇಳಿದರು.
ಮಂಗಳೂರಿನ ಭಕ್ತರು ಶ್ರೀ ಕ್ಷೇತ್ರ ಕಳಿಬೈಲಿಗೆ ಇಂದು ಆಗಮಿಸಿದ್ದರು. ಆದರೆ ದೇವಾಲಯದ ಸುತ್ತ ನೆರೆ ಇದ್ದುದರಿಂದ ಅವರಿಗೆ ಮಾರ್ಗ ಗುರುತಿಸಿ ಕ್ಷೇತ್ರಕ್ಕೆ ಬರಲು ಅಸಾಧ್ಯವಾಯಿತು. ವಿಷಯ ತಿಳಿದ ದೇವಳ ಸಮಿತಿಯವರು ವಿಶೇಷ ದೋಣಿಯಲ್ಲಿ ಅವರನ್ನು ಕ್ಷೇತ್ರಕ್ಕೆ ಕರೆತಂದಿದ್ದಾರೆ ಎಂದು ಅಭಿಜಿತ್ ವಿವರಿಸಿದರು.
ಕೋಟ, ಸಾಲಿಗ್ರಾಮ, ಸಾಯಿಬ್ರಕಟ್ಟೆ ಮತ್ತಿತರ ಪರಿಸರದ ಎಲ್ಲಾ ತಗ್ಗು ಪ್ರದೇಶಗಳೂ ಜಲಾವೃತವಾಗಿವೆ.
ಕೋಟ ಮೂರ್ಕೈ ಯಿಂದ ಸಾಯಿಬ್ರಕಟ್ಟೆಗೆ ಹೋಗುವ ಮುಖ್ಯರಸ್ತೆ ಯ ಉಪ್ಲಾಡಿಯಲ್ಲಿ ರಸ್ತೆ ಮೇಲೆಯೇ ನೆರೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. ಉಪ್ಲಾಡಿ ಹೊಳೆ ತುಂಬಿ ಹರಿಯುತ್ತಿದೆ. ಕೋಟ ಪೊಲೀಸರು ಮುಂಜಾಗರೂಕತಾ ಕ್ರಮವಾಗಿ ಅಪಾಯಕಾರಿ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.
ಕೋಟೇಶ್ವರದ ಐತಿಹಾಸಿಕ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಹೊರ ಪ್ರಾಕಾರದಲ್ಲಿ ನೀರು ತುಂಬಿಕೊಂಡಿದೆ. ಭಕ್ತರು ನೀರಿನಲ್ಲಿಯೇ ನಡೆದು ದೇವಾಲಯ ಪ್ರವೇಶಿಸಬೇಕಾಗಿದೆ.
ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿಯಿಂದ ಕುದ್ರೆಕೆರೆ ಬೆಟ್ಟು ಎಂಬಲ್ಲಿಗೆ ಸಾಗುವ ರಸ್ತೆ ಮೇಲೆ ನೆರೆ ನೀರು ಹರಿಯುತ್ತಿದ್ದು, ರಸ್ತೆ ಮತ್ತು ಹಳ್ಳವನ್ನು ಗುರುತಿಸುವುದೇ ಅಸಾಧ್ಯವಾಗಿದೆ. ಇಲ್ಲಿನ ಮನೆಗಳವರು ನೆರೆಯಿಂದ ಕಂಗಲಾಗಿದ್ದಾರೆ. ಭಜರಂಗ ದಳದವರು ಮತ್ತು ಸ್ಥಳೀಯ ಯುವಕರು ತಂಡಗಳಾಗಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿದ್ದಾರೆ.
