ಶಾಲಾ ವಠಾರಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗೆ ನಿಷೇಧ ಬೀದಿ ಬೀದಿಯಲ್ಲಿ ಆಚರಣೆಯ ಎಚ್ಚರಿಕೆ ನೀಡಿದ ಬಿಜೆಪಿ ಯುವಮೋರ್ಚಾ
ಮಂಗಳೂರು: ಶಾಲಾ ವಠಾರಗಳಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಗಣೇಶೋತ್ಸವ, ಶಾರಾದ ಪೂಜೆ ಸಹಿತ ಹಿಂದೂ ಸಂಪ್ರದಾಯ, ಆಚರಣೆಗೆ ಕಾಂಗ್ರೆಸ್ ಸರಕಾರ ಅಡ್ಡಿ ಬಂದರೆ ಬೀದಿ ಬೀದಿಯಲ್ಲಿ ಆಚರಣೆ ಶತಃಸಿದ್ದ ಎಂದು ಬಿಜೆಪಿ ಯುವಮೋರ್ಚಾ ಉತ್ತರ ಮಂಡಲ ಎಚ್ಚರಿಕೆ ನೀಡಿದೆ.
ಸುರತ್ಕಲ್ ಜಂಕ್ಷನ್‌ನಲ್ಲಿ ಆಯೋಜಿಸಿದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಭರತ್‌ರಾಜ್ ಕೃಷ್ಣಾಪುರ ಮಾತನಾಡಿ, ಒಗ್ಗಟ್ಟನ್ನು ಪ್ರತಿಪಾದಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕ್ ಗಣೇಶೋತ್ಸವ ಆಚರಣೆಗೆ ಪ್ರೋತ್ಸಾಹ ನೀಡಿದ್ದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಚರಣೆಗೆ ನಿಷೇಧ ಹೇರುತ್ತಿದೆ. ಈ ಮೂಲಕ ಹಿಂದೂ ಸಮಾಜದ ಒಗ್ಗಟ್ಟು ಬಗ್ಗು ಬಡಿಯಲು ಹಿಂದೂ ವಿರೋಧ ಕ್ರಮ ತೆಗೆದುಕೊಳ್ಳುತ್ತಿದೆ. ಇದನ್ನು ನಮ್ಮ ಹಿಂದೂ ಸಮಾಜ ಧೈರ್ಯದಿಂದ ಎದುರಿಸಿ ನಮ್ಮ ಆಚರಣೆಗೆ ಕುಂದುಂಟಾಗದಂತೆ ನಡೆಸುತ್ತೇವೆ ಸರಕಾರ ತಡೆದು ನೋಡಲಿ ಎಂದು ಸವಾಲೆಸೆದರು.
ಬಿಜೆಪಿ ದ.ಕ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ ಮಾತನಾಡಿ ಭಜನೆಯ ಮೂಲಕ ನಮ್ಮ ಸಂಪ್ರದಾಯವನ್ನು ಹತ್ತಿಕ್ಕುವುದರ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣೆಗಾಗಿ ಹಿಂದೂವಾಗುತ್ತಾರೆ. ಬಳಿಕ ಸಂಸತ್ತಿನಲ್ಲಿ ಹಿಂಸಾತ್ಮಕ ಹಿಂದೂಗಳು ಎನ್ನುತ್ತಾರೆ. ರಾಜ್ಯದ ಕಾಂಗ್ರೆಸ್ ಇದೀಗ ನಮ್ಮ ಆಚರಣೆಗೆ ಕೊಡಲಿಯೇಟು ನೀಡಲು ಹೊರಟಿದೆ.ಯಾರನ್ನೋ ಮೆಚ್ಚಿಸಲು ಹಿಂದೂಗಳ ಅಸ್ಥಿತ್ವಕ್ಕೆ ಅಲುಗಾಡಿಸಲು ಮುಂದಾದರೆ ಇದಕ್ಕೆ ತಕ್ಕ ಉತ್ತರ ನೀಡಲು ನಾವೂ ಸಿದ್ದರಿದ್ದೇವೆ ಎಂದರು.
ಜಿಲ್ಲಾ ಪ್ರಮುಖರಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಗಣೇಶಚತುರ್ಥಿ, ಶಾರದಾ ಪೂಜೆ, ಅಷ್ಟಮಿ ಹೀಗೆ ಸಾರ್ವಜನಿಕ ಆಚರಣೆಗೆ ಎಲ್ಲರೂ ಸೇರಿ ಆಚರಿಸುತ್ತೇವೆ. ಯಾವುದೇ ರೀತಿಯಲ್ಲಿ ಆಚರಣೆಯಿಂದ ಭಂಗವಿಲ್ಲ. ಆದರೆ ಕಾಂಗ್ರೆಸ್ ಸರಕಾರಕ್ಕೆ ಏಕೆ ಹಿಂದೂಗಳ ಮೇಲೆ ಇಷ್ಟು ದ್ವೇಷ ಎಂದು ಕಿಡಿ ಕಾರಿದರು.
ಮಂಡಲ ಅಧ್ಯಕ್ಷ ರಕ್ಷಿತ್ ಆರ್. ಪೂಜಾರಿ ಕಾಂಗ್ರೆಸ್ ಸರಕಾರ ತತ್‌ಕ್ಷಣ ಸುತ್ತೋಲೆ ಹಿಂಪಡೆಯದಿದ್ದರೆ ಬಿಜೆಪಿಯಿಂದ ಗ್ರಾಮ ಗ್ರಾಮಗಳಲ್ಲಿ ಸರಣಿ ಹೋರಾಟ ಆರಂಭಿಸಲಿದ್ದೇವೆ ಎಂದರು.
ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಾದ ಸಾಕ್ಷ್ಯ ಶೆಟ್ಟಿ, ಯಶ್‌ಪಾಲ್ ಸಾಲ್ಯಾನ್, ತಿಲಕ್‌ರಾಜ್ ಕೃಷ್ಣಾಪುರ, ಹರಿಪ್ರಸಾದ್, ಜಿತೇಶ್ ದೇವಾಡಿಗ, ಪ್ರಮೋದ್, ಧನುಷ್ ಕೊಠಾರಿ, ಸುದರ್ಶನ್, ಪೃಥ್ವಿ, ಜಿಲ್ಲಾ ಪ್ರಮುಖರಾದ ವರುಣ್‌ರಾಜ್ ಅಂಬಟ್, ನಿಶಾನ್ ಪೂಜಾರಿ, ಅಕ್ಷಿತ್ ನೋಂಡಾ, ನವೀನ್, ಸಂದೀಪ್ ಶೆಟ್ಟಿ, ಅವಿನಾಶ್ ಸುವರ್ಣ, ರಾಜ್ಯ ಮಹಿಳಾ ಮೋರ್ಚಾದ ಶ್ವೇತ ಪೂಜಾರಿ, ಉಪಮೇಯರ್ ಸುನಿತಾ, ಉತ್ತರ ಮಂಡಲ, ಶಕ್ತಿ ಕೇಂದ್ರ ಪದಾಧಿಕಾರಿಗಳು, ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.