ರೈಲ್ವೆ ಸಮಸ್ಯೆ-ಜನರ ಬೇಡಿಕೆಗೆ ಪೂರಕವಾಗಿ ಉನ್ನತ ಮಟ್ಟದ ಸಮಿತಿ ರಚನೆ: ಕ್ಯಾ. ಬ್ರಿಜೇಶ್ ಚೌಟ

ರೈಲ್ವೆ ಸಮಸ್ಯೆ-ಜನರ ಬೇಡಿಕೆಗೆ ಪೂರಕವಾಗಿ ಉನ್ನತ ಮಟ್ಟದ ಸಮಿತಿ ರಚನೆ: ಕ್ಯಾ. ಬ್ರಿಜೇಶ್ ಚೌಟ


ಮಂಗಳೂರು: ಕೊಂಕಣ, ನೈರುತ್ಯ ಮತ್ತು ದಕ್ಷಿಣ ರೈಲ್ವೇ ವಲಯಗಳಡಿ ಹಂಚಿರುವ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ರೈಲ್ವೇ ವ್ಯಾಪ್ತಿಯ ಸಮಸ್ಯೆಗಳನ್ನು ಜನರ ಬೇಡಿಕೆಗಳಿಗೆ ಪೂರಕವಾಗಿ ಸ್ಥಳೀಯವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಹಾಗೂ ಕಾರ್ಯಕಾರಿ ಎಂಬ ಎರಡು ಸಮಿತಿಗಳನ್ನು ರಚಿಸಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ದ.ಕ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಮೂರು ರೈಲ್ವೇ ವಿಭಾಗಗಳ ಹಿರಿಯ ಅಧಿಕಾರಿಗಳು, ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉನ್ನತ ಮಟ್ಟದ ಸಮಿತಿಯು ಸಂಸದರು, ಮೂರು ರೈಲ್ವೇ ವಿಭಾಗಗಳ ಮುಖ್ಯ ಅಧಿಕಾರಿಗಳು, ಸ್ಥಳೀಯ ಮೂವರು ಶಾಸಕರು, ಜಿಲ್ಲಾಧಿಕಾರಿ, ಇಬ್ಬರು ಎಸಿಗಳು, ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಒಳಗೊಂಡಿರುತ್ತದೆ.

ಕಾರ್ಯಕಾರಿ ಸಮಿತಿಯು ಮೂರು ವಿಭಾಗದ ಹಿರಿಯ ಅಧಿಕಾರಿಗಳು, ಹಿರಿಯ ಇಂಜಿನಿಯರ್ಗಳು, ವಿಭಾಗೀಯ ವ್ಯವಸ್ಥಾಪಕರು, ಕೆಸಿಸಿಐ ಸೇರಿದಂತೆ ಇತರ ರೈಲ್ವೇ ಬಳಕೆದಾರರ ಸಂಘಟನೆಗಳಿಂದ ಒಬ್ಬ ಸದಸ್ಯರನ್ನು ಹೊಂದಿರಲಿದೆ. ಉನ್ನತ ಮಟ್ಟದ ಸಮಿತಿಯು ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲಿದ್ದರೆ, ಅದಕ್ಕೆ ಪೂರಕವಾಗಿ ಕಾರ್ಯಕಾರಿ ಸಮಿತಿಯು ಪ್ರತಿ ತಿಂಗಳಿಗೊಮ್ಮೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಸಭೆ ನಡೆಸಲಿದೆ ಎಂದು ಅವರು ಹೇಳಿದರು.

ವಿಶ್ವದರ್ಜೆಗೆ..

ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣವನ್ನು ಸುಮಾರು 310 ಕೋಟಿ ರೂ.ಗಳಲ್ಲಿ ಮೇಲ್ದರ್ಜೆಗೇರಿಸಲು ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದ್ದು, 2025 ಮಾರ್ಚ್‌ನೊಳಗೆ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭಗೊಳ್ಳಲಿದೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ನೂತನ ಯೋಜನೆಗಾಗಿ ಸೆಂಟ್ರಲ್ ರೈಲ್ವೇ ನಿಲ್ದಾಣದ 56.74 ಎಕರೆ ಜಾಗವನ್ನು ಬಳಕೆ ಮಾಡಲಾಗುತ್ತಿದ್ದು, 1200 ಕಾರು ಪಾರ್ಕಿಂಗ್ನೊಂದಿಗೆ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ ಎಂದು ದಕ್ಷಿಣ ರೈಲ್ವೇಯ ಪಾಲ್ಘಾಟ್ ವಿಭಾಗದ ಡಿಆರ್‌ಎಂ ಅರುಣ್ ಚತುರ್ವೇದಿ ಮಾಹಿತಿ ನೀಡಿದರು.

ಪಾಂಡೇಶ್ವರದಲ್ಲಿ ಗೂಡ್ಶೆಡ್ಗೆ ರೈಲುಗಳ ಸಂಚಾರದ ವೇಳೆ ದಿನಕ್ಕೆ ಸುಮಾರು 15ಕ್ಕೂ ಅಧಿಕ ಬಾರಿ ಗೇಟ್ ಹಾಕಲಾಗುತ್ತದೆ. ಪ್ರತಿ ಬಾರಿಯೂ ಸುಮಾರು 20 ನಿಮಿಷಗಳ ಕಾಲ ಗೇಟ್ ಬಂದ್ ಮಾಡಲಾಗುತ್ತದೆ. ಇದರಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ ಮೊದಲಾದವರು ಆಗ್ರಹಿಸಿದರು.

2014-15ನೇ ಸಾಲಿನಲ್ಲಿ ಈ ಭಾಗದಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಪಾಲಿಕೆ ವತಿಯಿಂದ ನಕ್ಷೆ ನೀಡಲಾಗಿತ್ತು. ಅದು ಸಿಕ್ಕರೆ ಉತ್ತಮ. ಇಲ್ಲವಾದಲ್ಲಿ ರೈಲ್ವೇ ವತಿಯಿಂದಲೇ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. ಅಲ್ಲಿ ರೈಲ್ವೇ ಕೆಳ ಸೇತುವೆ ನಿರ್ಮಾಣ ಅಸಾಧ್ಯ ಎಂದು ಡಿಆರ್‌ಎಂ ಅರುಣ್ ಚತುರ್ವೇದಿ ಹೇಳಿದರು.

ರೈಲ್ವೇ ಬಳಕೆದಾರರ ಪರವಾಗಿ ಮಾತನಾಡಿದ ಹನುಮಂತ ಕಾಮತ್, ಸಿಎಸ್ಟಿ ಮುಂಬೈ- ಮಂಗಳೂರು ರೈಲು ಮಂಗಳೂರು ಸೆಂಟ್ರಲ್‌ಗೆ ಮಂಜೂರಾಗಿದ್ದರೂ, ಮಂಗಳೂರು ಜಂಕ್ಷನ್‌ನಲ್ಲಿ 

ನಿಲುಗಡೆಯಾಗುತ್ತಿದೆ. ಅದನ್ನು ವಿಸ್ತರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಮಂಗಳೂರು ಸುಬ್ರಹ್ಮಣ್ಯದ ಹಳೆ ರೈಲನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ, ಪುನರಾರಂಭಿಸುವಂತೆ ಕೋರಿದಾಗ, ಸುಬ್ರಹ್ಮಣ್ಯ ಯಾರ್ಡ್ನಲ್ಲಿ ವಿದ್ಯುದ್ದೀಕರಣ ಬಾಕಿ ಇದೆ. ಬಳಿಕ ಸಮಯವನ್ನು ನಿಗದಿಪಡಿಸಿ ಕ್ರಮ ವಹಿಸಲಾಗುವುದು ಎಂದು ರೈಲ್ವೇ ಅಧಿಕಾರಿ ಹೇಳಿದರು.

ಈ‌ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಕೊಂಕಣ ರೈಲ್ವೇಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ. ನಿಕಂ,, ನೈರುತ್ಯ ರೈಲ್ವೇ ಮೈಸೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ವ್ಯವಸ್ಥಾಪಕಿ ಮಲ್ಲಿಕಾ  ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article