Mangalore: ಲಾರ್ವ ಉತ್ಪತ್ತಿ ಹೊಂದಿರುವ ಪ್ರದೇಶ-ಕಟ್ಟಡ ಮಾಲಕರಿಗೆ ದಂಡ: ಸಿ.ಎಲ್. ಆನಂದ್

Mangalore: ಲಾರ್ವ ಉತ್ಪತ್ತಿ ಹೊಂದಿರುವ ಪ್ರದೇಶ-ಕಟ್ಟಡ ಮಾಲಕರಿಗೆ ದಂಡ: ಸಿ.ಎಲ್. ಆನಂದ್

ಮಂಗಳೂರು: ಜಿಲ್ಲೆಯಲ್ಲಿ ಡೆಂಗ್ಯೂ ರೋಗದ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಡೆಂಗ್ಯೂ ರೋಗಕ್ಕೆ ಕಾರಣವಾಗುವ ಲಾರ್ವಗಳನ್ನು ನಾಶಗೊಳಿಸಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಸಿ.ಎಲ್. ಆನಂದ್ ಹೇಳಿದರು.

ಅವರು ಸೋಮವಾರ ನಗರದ ಮಹಾನಗರಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಗ್ಯೂ ರೋಗ ನಿರ್ಮೂಲನೆ ಹಾಗೂ ಕೈಗೊಂಡ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ರೋಗ ಪತ್ತೆಯಾದ ಪ್ರದೇಶದಲ್ಲಿ ಇರುವ ಪ್ರತಿ ಮನೆಗಳಿಗೆ ಹಾಗೂ ಕಟ್ಟಡಗಳಲ್ಲಿ ಲಾರ್ವ ಉತ್ಪತ್ತಿಯಾಗುವ ಪ್ರದೇಶವನ್ನು ಗುರುತಿಸಿ ಪ್ರತಿನಿತ್ಯವೂ ರಾಸಾಯನಿಕ ಸಿಂಪಡನೆ ಮಾಡಬೇಕು ಹಾಗೂ ಸುತ್ತಮುತ್ತಲು ಫಾಗಿಂಗ್ ಅನ್ನು ಪಾಲಿಕೆಯ ಎಲೆಕ್ಟ್ರಾನಿಕ್ ಆಟೋ ಮೂಲಕ ಸಿಂಪಡಿಸಬೇಕು ಎಂದು ಸೂಚಿಸಿದರು.

ಡೆಂಗ್ಯೂ ರೋಗವು ಪತ್ತೆಯಾದ ದಿನವೇ ರೋಗಿಯ ಮನೆಯ ಸುತ್ತಮುತ್ತ ಲಾರ್ವ ಉತ್ಪತ್ತಿಯನ್ನು ಗುರುತಿಸಿ ಸಿಂಪಡನೆ ನಡೆಸಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿ ಸಿಂಪಡನೆಯನ್ನು ಕೈಗೊಳ್ಳುವ ದಿನದ ಬಗ್ಗೆ ವೇಳಾಪಟ್ಟಿಯನ್ನು ತಯಾರಿಸಿ ಆಯಾ ಪ್ರದೇಶದ ಜನರಿಗೆ ಮಾಹಿತಿ ಒದಗಿಸಬೇಕು ಎಂದರು. 

ಜನರು ಡೆಂಗೀ ರೋಗದ ಬಗ್ಗೆ ತಾತ್ಸಾರ ಮನೋಭಾವದಿಂದ, ರೋಗ ನಿರ್ಮೂಲನೆಯ ಬಗ್ಗೆ ಯೋಚಿಸುತ್ತಿಲ್ಲ. ಜನರಿಗೆ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಬೇಕು. ಡೆಂಗ್ಯೂ ರೋಗದಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು ಎಂದರು.

ಇನ್ನು ಮುಂದೆ ಲಾರ್ವಗಳು ಕಂಡು ಬರುವ ವಾಸ್ತವ್ಯದ ಕಟ್ಟಡ ರೂ. 500 ವಾಣಿಜ್ಯ ಕಟ್ಟಡ ರೂ. 500 ನಿರ್ಮಾಣ ಹಂತದಲ್ಲಿರುವ ಕಟ್ಟಡ ರೂ. 15,000 ಬಹುಮಹಡಿ  ವಾಸ್ತವ್ಯದ ಕಟ್ಟಡ ರೂ. 5,000 ಗಳಂತೆ ಕಟ್ಟಡಗಳ ಮಾಲೀಕರ ಮೇಲೆ ಕ್ರಮ ತೆಗೆದುಕೊಂಡು ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು. 

ಜಿಲ್ಲಾ ರೋಗವಾಹಕ ಮತ್ತು ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ಅವರು ಡೆಂಗ್ಯೂ ರೋಗದ ನಿರ್ಮೂಲನೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಡಾ. ಹರ್ಷಿತ್, ತಾಲೂಕು ಆರೋಗ್ಯ ಅಧಿಕಾರಿ   ಡಾ. ಸುಜಯ್, ಮಂಗಳೂರು ಮಹಾನಗರ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article