Mangalore: ಲಸಿಕೆಯಿಂದ ಮಾತ್ರ ದಢರಾ, ರುಬೆಲ್ಲಾ ರೋಗದ ನಿರ್ಮೂಲನೆ: ಸಿ.ಎಲ್. ಆನಂದ್

Mangalore: ಲಸಿಕೆಯಿಂದ ಮಾತ್ರ ದಢರಾ, ರುಬೆಲ್ಲಾ ರೋಗದ ನಿರ್ಮೂಲನೆ: ಸಿ.ಎಲ್. ಆನಂದ್


ಮಂಗಳೂರು: ದಢರಾ ಮತ್ತು ರುಬೆಲ್ಲಾ ರೋಗದ ನಿಯಂತ್ರಣವೂ ಸಮರ್ಪಕವಾದ ಲಸಿಕಾಕರಣದಿಂದ ಮಾತ್ರ ಸಾಧ್ಯ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಸಿ.ಎಲ್. ಆನಂದ್ ಹೇಳಿದರು.

ಅವರು ಸೋಮವಾರ ನಗರದ ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳಿಗೆ ನೀಡುವ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.97 ಮಂಗಳೂರು ನಗರ ವ್ಯಾಪ್ತಿಯಲ್ಲಿ ಶೇ. 69 ರಷ್ಟು ಕುಂಠಿತ ಪ್ರಗತಿಯನ್ನು ಸೂಚಿಸುತ್ತಿದ್ದು, ಎಂಆರ್ 1 ಮತ್ತು ಎಂಆರ್ 2 ಲಸಿಕೆಯಿಂದ ವಂಚಿತರಾಗಿರುವ ಎಲ್ಲಾ ಮಕ್ಕಳಿಗೂ ಸಮರ್ಪಕವಾಗಿ ಲಸಿಕೆ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಆಯುಕ್ತರು ಸೂಚಿಸಿದರು.

ಐದರಿಂದ ಆರು ವರ್ಷದ ಮಕ್ಕಳು ಶಾಲೆಗೆ ದಾಖಲಾಗುವ ಸಮಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯ ಪ್ರಕಾರ ಮಕ್ಕಳು ಲಸಿಕೆ ಪಡೆದಿರುವ ಕುರಿತು ಹಾಗೂ ಮುಖ್ಯವಾಗಿ ದಢರಾ ರುಬೆಲ್ಲ ಲಸಿಕೆಯ ಎರಡು ಡೋಸ್ ಮತ್ತು ಡಿ.ಪಿ.ಟಿ ಬೂಸ್ಟರ್-2 ಲಸಿಕೆಯನ್ನು ಪಡೆದಿರುವ ಕುರಿತು ದಾಖಲೆಯನ್ನು ಪರಿಶೀಲಿಸಿ ಅದರ ಪ್ರತಿಯೊಂದು ಪಡೆಯುವಂತೆ ಹಾಗೂ ಲಸಿಕೆ ಪಡೆದಿರುವ ಮಕ್ಕಳನ್ನು ಗುರುತಿಸಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವಂತೆ ಹಾಗೂ ಮಕ್ಕಳು ಸಂಪೂರ್ಣ ಲಸಿಕೆ ಪಡೆದಿರುವ ಕುರಿತು ಮಾಹಿತಿಯನ್ನು ಪಡೆಯಲು ಶಾಲಾ ದಾಖಲಾತಿ ನಮೂನೆಯಲ್ಲಿ ಪ್ರತ್ಯೇಕ ಕಾಲಂ ಅನ್ನು ಸೇರ್ಪಡಿಸುವಂತೆ ಸೂಚಿಸಿದರು.

ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಕ್ರಮ ವಹಿಸುವಂತೆ ತಿಳಿಸಿದರು. ತಾಯಂದಿರ ಸಭೆ ಹಾಗೂ ಬಾಲ ವಿಕಾಸ ಸಮಿತಿ ಸಭೆಯಲ್ಲಿ, ದಢರಾ ರುಬೆಲ್ಲಾ ಲಸಿಕೆಯ ಬಗ್ಗೆ ಮಾಹಿತಿ ನೀಡಬೇಕು. ಸಿಡಿಪಿಓಗಳು ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾಗಿ ಮೇಲ್ವಿಚಾರಣೆ ನಡೆಸಬೇಕು ಹಾಗೂ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಟಾಸ್ಕ್ ಪೊರ್ಸ್ ಸಭೆಯಲ್ಲಿ ಮೇಲ್ವಿಚಾರಣ ವರದಿಯನ್ನು ಪ್ರಸ್ತುತಪಡಿಸಿ  ಚರ್ಚಿಸಬೇಕು ಎಂದು ಹೇಳಿದರು.

ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯು ನೇಮಕಗೊಂಡ ವ್ಯಾಕ್ಸಿನೇಟರ್ ಗಳನ್ನು ಒದಗಿಸಬೇಕು, ಮಹಿಳಾ ಆರೋಗ್ಯ ಸಮಿತಿಯ ಸದಸ್ಯರನ್ನು ಅಧಿವೇಶನ ಸ್ಥಳಕ್ಕೆ ಮಕ್ಕಳನ್ನು ಸಜ್ಜುಗೊಳಿಸಲು ತೊಡಗಿಸಿಕೊಳ್ಳಬೇಕು, ಹೊಸ ವಲಸೆ ಸೈಟ್ಗಳು ಮತ್ತು ಕೈಗಾರಿಕಾ ವಸತಿ ಸಂಕೀರ್ಣಗಳ ಪಟ್ಟಿಯನ್ನು ಹಂಚಿಕೊಳ್ಳಬೇಕು ಮತ್ತು ಆರ್.ಐ ಶಿಬಿರಗಳನ್ನು ನಡೆಸುವ ಪ್ರದೇಶಗಳಿಗೆ ಲಸಿಕೆಯನ್ನು ಪಡೆಯದ ಮಕ್ಕಳನ್ನು ಗುರುತಿಸಿ ಕರೆತರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. 

ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಆಯುಷ್ಮತಿ ಆರೋಗ್ಯ ಕೇಂದ್ರಗಳಿಗೆ ಖಾಸಗಿ ಕ್ಲಿನಿಕ್ಗಳ ನುರಿತ ವೈದ್ಯರನ್ನು ವಾರದಲ್ಲಿ ಒಂದು ದಿನದ ಮಟ್ಟಿಗೆ ಉಚಿತ ಸೇವೆಯನ್ನು ನೀಡಲು ಮನವಿ ಮಾಡಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಡಾ. ಹರ್ಷಿತ್, ತಾಲೂಕು ಆರೋಗ್ಯ ಅಧಿಕಾರಿ  ಡಾ. ಸುಜಯ್, ಮಂಗಳೂರು ಮಹಾನಗರ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article