
Mangalore: ಕಪಿತಾನಿಯಾ, ಕೊಣಾಜೆ ಕಳವು-ಆರೋಪಿಗಳ ಸೆರೆ
ಮಂಗಳೂರು: ನಗರದ ಕಪಿತಾನಿಯಾ ಬಳಿ ದಿನಸಿ ಅಂಗಡಿಯಿಂದ 10 ಲಕ್ಷ ರೂ. ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ಮೂಲದ ಮಹಮ್ಮದ್ ನಜೀರ್ ಹೌಸಿಲ್ ಖಾನ್(27) ಹಾಗೂ ಇಲಿಯಾಸ್ ಖಾನ್(22) ಬಂಧಿತ ಆರೋಪಿಗಳು. ಘಟನೆ ನಡೆದ 16 ಗಂಟೆಯಲ್ಲೇ ಆರೋಪಿಗಳನ್ನು ಪತ್ತೆ ಮಾಡಿ
ಬಂಧಿಸುವಲ್ಲಿ ಕಂಕನಾಡಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜು.೮ ರಂದು ಕಪಿತಾನಿಯೋ ಸಮೀಪವಿರುವ ಲೋಟಸ್ ಗ್ಯಾಲಕ್ಸಿ ಕಾಂಪ್ಲೆಕ್ಸ್‌ನ ಬಿಎಚ್ ಟ್ರೇಡರ್ಸ್ ಎಂಬ ದಿನಸಿ ಅಂಗಡಿಯ ಶೆಟರ್‌ನ್ನು ಇಬ್ಬರು ಕಳ್ಳರು ಮೀಟಿ ಎತ್ತಿ ಕ್ಯಾಶ್ ಕೌಂಟರ್‌ನಲ್ಲಿದ್ದ ಸುಮಾರು 10.20 ಲಕ್ಷ ರೂ. ಮೊತ್ತವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಅಂಗಡಿ ಮಾಲೀಕ ಉಮ್ಮರ್ ಫಾರೂಕ್ ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಿದ್ದರು.
ಕಂಕನಾಡಿ ನಗರ ಠಾಣಾ ನಿರೀಕ್ಷಕ ಟಿ. ಡಿ. ನಾಗರಾಜ್ ನೇತೃತ್ವದಲ್ಲಿ ತನಿಖಾ ತಂಡ ಕೃತ್ಯ ಈ ಪ್ರಕರಣ ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೃತ್ಯ ಸ್ಥಳದ ಮತ್ತು ಪಂಪ್‌ವೆಲ್ ಸುತ್ತ -ಮುತ್ತ ದೊರೆತ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ರಾತ್ರಿ ವೇಳೆ ಸಂಚರಿಸಿದ ಸಂಶಯಿತರ ಬಗ್ಗೆ ಆಟೋರಿಕ್ಷಾ ಚಾಲಕರನ್ನೆಲ್ಲ ಪೊಲೀಸರು ವಿಚಾರಿಸಿದಾಗ ಕೃತ್ಯ ನಡೆದ ರಾತ್ರಿ ಇಬ್ಬರು ಹಿಂದಿ ಮಾತನಾಡುವ ಸಂಶಯಿತರನ್ನು ರೈಲ್ವೆನಿಲ್ದಾಣಕ್ಕೆ ಬಿಟ್ಟ ಬಗ್ಗೆ ಮಾಹಿತಿ ದೊರಕಿತ್ತು.
ರೈಲ್ವೆ ಪೊಲೀಸರ ನೆರವು..
ಅದೇ ರಾತ್ರಿ 11.45ರ ವೇಳೆಗೆ ಪುಣೆಯ ಆರ್‌ಪಿಎಫ್ ಹಾಗೂ ಜಿಆರ್‌ಪಿ ಪೊಲೀಸರು ಇಬ್ಬರು ಸಂಶಯಿತರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಅವರ ಬಳಿ ಬ್ಯಾಗ್ ಇರದೇ ಇದ್ದು ಕೃತ್ಯದ ಬಗ್ಗೆ ಹೇಳಿರಲಿಲ್ಲ. ಅವರನ್ನು ಅಲ್ಲಿಯೇ ಹಿಡಿದಿಟ್ಟುಕೊಳ್ಳುವಂತೆ ಮನವಿ ಮಾಡಿಕೊಂಡ ನಂತರ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದ ಪಿಎಸ್‌ಐ ಶಿವಕುಮಾರ್, ಸಿಬ್ಬಂದಿಗಳಾದ ಜಯಾನಂದ, ರಾಜೇಸಾಬ್ ಮುಲ್ಲಾ, ಚೇತನ್, ಪ್ರವೀಣ್ ತಂಡ
ಕೂಡಲೇ ಪುಣೆಗೆ ತೆರಳಿ ಬಿಆರ್‌ಪಿ ಪೊಲೀಸರ ವಶದಲ್ಲಿದ್ದ ಇಬ್ಬರನ್ನು ವಿಚಾರಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ರೈಲ್ವೆ ಫ್ಲ್ಯಾಟ್‌ಫಾರ್ಮ್‌ನ ಬೇರೊಂದು ಕಡೆ ಹಣದ ಬ್ಯಾಗ್‌ನ್ನು ಬಚ್ಚಿಟ್ಟಿರುವುದಾಗಿ ತಿಳಿಸಿದ್ದರು. ಈ ವೇಳೆ ಕಳವಾದ 1.13 ಲಕ್ಷ ರೂ. ನಗದನ್ನು ವಶಪಡಿಸಲಾಗಿದೆ. ನಂತರ ಪುಣೆ ನ್ಯಾಯಾಲಯದಲ್ಲಿ ಟ್ರಾನ್ಸಿಟ್ ವಾರೆಂಟ್ ಪಡೆದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳನ್ನು ವಿಚಾರಿಸಿದಾಗ ಇಬ್ಬರು ಉತ್ತರಪ್ರದೇಶ ರಾಜ್ಯದವರಾಗಿದ್ದು, ಈಗಾಗಲೇ ಹಲವು ಜನರು ಮಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದು, ಮಂಗಳೂರು ನಗರವು ಶ್ರೀಮಂತ ನಗರವಾಗಿದ್ದು, ಇಲ್ಲಿ ಅನೇಕ ಹೋಟೆಲ್ ಉದ್ಯಮ ಮತ್ತು ಹೆಚ್ಚಿನ ಕೈಗಾರಿಕೆಗಳು ಇರುವುದರಿಂದ ನಾವುಗಳು ಕೇಟರಿಂಗ್ ಕೆಲಸ ಅಥವಾ ಯಾವುದಾದರು ಕೆಲಸ ಮಾಡುವ ಸಲುವಾಗಿ
ಬಂದಿದ್ದೆವು. ಕೆಲಸ ತಕ್ಷಣಕ್ಕೆ ಸಿಗದೇ ಇದ್ದುದರಿಂದ ಮತ್ತು ಅವರ ಬಳಿಯಿದ್ದ ಹಣ ಖರ್ಚಾಗಿದ್ದರಿಂದ ಯಾವುದಾದರೂ ಸಣ್ಣ ಪುಟ್ಟ ಕಳ್ಳತನ ಮಾಡಲು ನಿರ್ಧರಿಸಿದ್ದೆವು ಎಂದಿದ್ದಾರೆ.
ಕೊಣಾಜೆಯಲ್ಲಿ ಕಳವು...
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಮೂರು ಮನೆಗಳಿಗೆ ನುಗ್ಗಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಗಳನ್ನು ಮಂಜೇಶ್ವರದ ಶಿಹಾಬ್, ಬಜ್ಪೆಯ ಅರ್ಫ್ರಾಝ್, ಸಫ್ವಾನ್ ಮತ್ತು ಜಂಶೀರ್ ಎಂದು ಗುರುತಿಸಲಾಗಿದೆ.
ಕೊಣಾಜೆ ಪೊಲೀಸರು ಮುದುಂಗಾರುಕಟ್ಟೆಯ ಚೆಕ್‌ಪೋಸ್ಟ್‌ನಲ್ಲಿ ಜು. 10ರಂದು ರಾತ್ರಿ ತಪಾಸಣೆ ಮಾಡುತ್ತಿದ್ದಾಗ ಕಾರಿನಲ್ಲಿದ್ದ ಮೂವರನ್ನು ಸಂಶಯದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಈ ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ತಂಡದ ಪ್ರಮುಖ ಆರೋಪಿ ಅಶ್ರಫ್ ಅಲಿಯನ್ನು ಕುಂಬಳೆ ಪೊಲೀಸರು ಈಗಾಗಲೆ ಬಂಧಿಸಿದ್ದಾರೆ ಎಂದು ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್, ಎಸಿಪಿ ಧನ್ಯ ಎಸ್. ನಾಯಕ್ ಉಪಸ್ಥಿತರಿದ್ದರು.