
Mangalore: ಮಹಾಕಾಳಿಪಡ್ಪು ಅಂಡರ್ ಪಾಸ್ ಕಾಮಗಾರಿ ವಿಳಂಬ ಶಾಸಕ ವೇದವ್ಯಾಸ ಕಾಮತರಿಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ
ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿದ್ದು, ಈ ರಸ್ತೆಯನ್ನು ಅವಲಂಭಿಸುವ ಜನ ಪರದಾಡುವುದು ಮಾತ್ರವಲ್ಲದೆ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಅಡಚಣೆಯುಂಟಾಗಿದೆ. ರೈಲ್ವೇ ಕಾಮಗಾರಿಯ ಪರಿಶೀಲಿಸಬೇಕಾಗಿದ್ದ ಶಾಸಕ ವೇದವ್ಯಾಸ ಕಾಮತರ ಬೇಜವಾಬ್ದಾರಿಯಿಂದಾಗಿ ಒಂದು ಊರಿಗೆ ಸಂಪರ್ಕಿಸುವ ಮುಖ್ಯರಸ್ತೆಯೇ ಮುಚ್ವಿಹೋಗಿದೆ.
ಇದಕ್ಕೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆ ನೇರ ಜವಾಬ್ದಾರಿಯಾಗಿದೆ. ರೈಲ್ವೇ ಕೆಳಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳದಿದ್ದಲ್ಲಿ ಶಾಸಕ ವೇದವ್ಯಾಸ ಕಾಮತರ ಕಚೇರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಲಿದ್ದೇವೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ, ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದರು.
ಅವರು ಜು.1 ರಂದು ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳಸೇತುವೆ ವಿಳಂಬ ಧೋರಣೆಯನ್ನು ಖಂಡಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಪರ್ಯಾಯ ಒಳರಸ್ತೆಗಳ ಸರಿಪಡಿಸಲು ಒತ್ತಾಯಿಸಿ ಜಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಬಳಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಮಗಾರಿ ಸಂಪೂರ್ಣ ಕಳಪೆಮಟ್ಟದ ರೀತಿಯಲ್ಲಿ ಗೋಚರಿಸುತ್ತಿದೆ. ಈ ಹಿಂದೆಯೇ ಕಾಮಗಾರಿ ವೇಳೆ ಕುಸಿತ ಕಂಡ ಪ್ರಕರಣವನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಡಲಾಯಿತು. ಅಂತರಾಷ್ಟ್ರೀಯ ಮಟ್ಟದ ಇಂಜನೀಯರ್‌ಗಳನ್ನು ಒಳಗೊಂಡಿರುವ ಕೇಂದ್ರದ ರೈಲ್ವೇ ಇಲಾಖೆಗೆ ಈವರೆಗೂ ಕಾಮಗಾರಿ ಪೂರ್ಣಗೊಳಿಸಲಾಗಿಲ್ಲ. ಕಳೆದ ಹಲವು ಅವಧಿಗಳಿಂದ ಆಯ್ಕೆಗೊಂಡು ಬಂದಿರುವ ಬಿಜೆಪಿ ಸಂಸದರಿಗೂ ಊರಿನ ಅಭಿವೃದ್ಧಿ ಪ್ರಶ್ನೆಯ ಬಗ್ಗೆ ಕಾಳಜಿಗಳೇ ಇಲ್ಲವಾಗಿದೆ ಎಂದು ಟೀಕಿಸಿದರು.
ಶಾಸಕ ವೇದವ್ಯಾಸ ಕಾಮತ್, ಸಂಸದ ಬ್ರಿಜೇಶ್ ಚೌಟರು ಮತ್ತು ಪಾಲಿಕೆ ಮೇಯರ್ ಮಂಗಳೂರಿನಿಂದ ಕೇರಳದ ಕಣ್ಣೂರುವರೆಗೆ ರೈಲು ಪ್ರಯಾಣಿಸಿ ನೋಡಬೇಕು. ಕೇರಳದ ಸಣ್ಣ ಪುಟ್ಟ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ರೈಲ್ವೇ ಕೆಳ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಿರುವ ಪರಿ ಕಾಣಬೇಕು. ಇಲ್ಲಿ ಇಷ್ಟೊಂದು ದೊಡ್ಡ ಮಂಗಳೂರು ಮಹಾನಗರ ಪಾಲಿಕೆ, ಅದರೊಳಗೆ ಸ್ಮಾರ್ಟ್ ಸಿಟಿಯ ಸಾವಿರಾರು ಕೋಟಿ ಅನುದಾನ, ಇನ್ನು ಕೇಂದ್ರದ ಹಣಕಾಸು ನೆರವುಗಳಿದ್ದರೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ರೈಲು ಹೊರಟ ತಕ್ಷಣ ಪ್ರಾರಂಭದಲ್ಲಿ ಸಿಗುವ ಮೊದಲ ಮಾನವರಹಿತ ರೈಲ್ವೇಗೇಟ್‌ಗೆ ಕೆಳಸೇತುವೆ ನಿರ್ಮಿಸಲು ಈವರೆಗೂ ಸಾಧ್ಯವಾಗಿಲ್ಲ ಎಂಬುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.
ಬಿಜೆಪಿ ಆಡಳಿತದ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿ ಕೆಲಸದ ಬಗ್ಗೆ ದಿನಾ ಸಾಲು ಸಾಲು ಘಟನೆಗಳ ಬಗ್ಗೆ ವರದಿಗಳು ಕಾಣಸಿಗುತ್ತಿವೆ. ನಿನ್ನೆ ಜಾರ್ಖಾಂಡ್ ಸೇತುವೆ ಮುರಿದು ಬಿದ್ದರೆ, ಮೊನ್ನೆ ಬಿಹಾರದ ಸೇತುವೆಗಳು, ರಾಮ ಮಂದಿರ ಸೋರುತ್ತಿದೆ, ಇನ್ನು ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕುಸಿತದಿಂದ ಹಲವರು ಪ್ರಾಣ ಕಳೆದುಕೊಳ್ಳುವಂತಾಯಿತು. ಪಡೀಲ್ ಹೈವೇ ಮತ್ತು ಪಡೀಲ್ ಬಜಾಲ್ ಕೆಳ ಸೇತುವೆ ಕಾಮಗಾರಿ ಅನುಭವಗಳು ಕಣ್ಣ ಮುಂದೆನೇ ಇದೆ. ಇನ್ನು ಈ ಸೇತುವೆಯ ಕಥೆ ಹೇಗಿರುತ್ತೋ ಎಂದು ಕಾದು ನೋಡಬೇಕಾಗಿದೆ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಪ್ರತಿಭಟನೆಯಲ್ಲಿ ಸ್ಥಳೀಯರೂ, ಸಾಮಾಜಿಕ ಹೋರಾಟಗಾರರಾದ ಜೆ. ಇಬ್ರಾಹಿಂ ಜೆಪ್ಪು, ಸ್ಥಳೀಯ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಟೆಂಪೋ ಚಾಲಕರ ಸಂಘಟನೆಯ ಮುಖಂಡ ಮುಕ್ಬಲ್ ಅಹಮ್ಮದ್, ದೇವದಾಸ್ ಪೂಜಾರಿ, ಸಿಪಿಐಎಂ ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ಪ್ರಮೋದಿನಿ ಕಲ್ಲಾಪು ಮತ್ತಿತರರರು ಭಾಗವಹಿಸಿದ್ದರು.
ಹೋರಾಟದ ನೇತೃತ್ವವನ್ನು ಸಿಪಿಐಎಂನ ಕೇಂದ್ರ ವಿಭಾಗ ಸಮಿತಿಯ ಸಂಚಾಲಕಿ ಪ್ರಮೀಳಾ ದೇವಾಡಿಗ, ಸಿಪಿಐಎಂ ಬಜಾಲ್ ವಿಭಾಗ ಸಮಿತಿಯ ಸಂಚಾಲಕ ದೀಪಕ್ ಬಜಾಲ್, ಸ್ಥಳೀಯ ಕಮ್ಯುನಿಸ್ಟ್ ನಾಯಕರಾದ ನಾಗೇಶ್ ಕೋಟ್ಯಾನ್, ಭಾರತಿ ಬೋಳಾರ, ಇತರ ಸಿಪಿಐಎಂನ ಯುವ ನಾಯಕರಾದ ವರಪ್ರಸಾದ್ ಬಜಾಲ್, ಲೋಕೇಶ್ ಎಂ, ಅಶೋಕ್ ಸಾಲ್ಯಾನ್, ಜಯಪ್ರಕಾಶ್ ಜಲ್ಲಿಗುಡ್ಡ, ತಯ್ಯುಬ್ ಬೆಂಗರೆ, ಮುಝಾಫರ್, ಅಸುಂತ ಡಿಸೋಜ, ಯೋಗಿತಾ ಉಳ್ಳಾಲ, ನಾಸಿರ್ ಬೆಂಗರೆ ಮತ್ತಿತರರು ವಹಿಸಿದ್ದರು.