Mangalore: ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ ಹೆಸರು, ಸಿಬಿಐ ತನಿಖೆ ಆಗಲಿ: ವೇದವ್ಯಾಸ ಕಾಮತ್

Mangalore: ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ ಹೆಸರು, ಸಿಬಿಐ ತನಿಖೆ ಆಗಲಿ: ವೇದವ್ಯಾಸ ಕಾಮತ್


ಮಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಸೈಟುಗಳ ಹಂಚಿಕೆಯಲ್ಲಿ ೪ ಸಾವಿರ ಕೋಟಿ ರೂ. ಗಳ ಭಾರೀ ಅಕ್ರಮ ನಡೆದಿದ್ದು, ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಹೆಸರು ಉಲ್ಲೇಖವಾಗಿ ಕಾಂಗ್ರೆಸ್ ಸರ್ಕಾರದ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೇರಿ ಒಂದು ವರ್ಷದಲ್ಲೇ ಹಗರಣಗಳ ಮೇಲೆ ಹಗರಣಗಳು ಬಯಲಿಗೆ ಬರುತ್ತಿವೆ. ಮೊದಲು ವಾಲ್ಮೀಕಿ ನಿಗಮದ ೧೮೭ ಕೋಟಿ ರೂ.ಹಗರಣ, ಈಗ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ೪ ಸಾವಿರ ಕೋಟಿ ರೂ.ಗಳ ಮುಡಾ ಸೈಟ್ ಬ್ರಹ್ಮಾಂಡ ಭ್ರಷ್ಟಾಚಾರ. ಅದರಲ್ಲೂ ಮುಖ್ಯಮಂತ್ರಿಗಳ ಪತ್ನಿ ಹೆಸರು ಉಲ್ಲೇಖವಾದ ಕೂಡಲೇ ನಗರಾಭಿವೃದ್ಧಿ ಇಲಾಖೆ ಆಯುಕ್ತ ಸೇರಿದಂತೆ ಕೆಲ ಅಧಿಕಾರಿಗಳನ್ನು ಸಂಶಯಾಸ್ಪದವಾಗಿ ವರ್ಗಾವಣೆಗೊಳಿಸಿ ಇಡೀ ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಇಷ್ಟೆಲ್ಲಾ ಆದರೂ ಸಿದ್ದರಾಮಯ್ಯನವರ ಮೌನ ಮಾತ್ರ ಇನ್ನಷ್ಟು ಅನುಮಾನಕ್ಕೆಡೆ ಮಾಡಿದೆ ಎಂದರು.

ರಾಜ್ಯದಲ್ಲಿ ಸದ್ಯಕ್ಕೆ, ಯಾವುದೇ ಹಗರಣಗಳು ಬೆಳಕಿಗೆ ಬಂದ ಕೂಡಲೇ ಒಂದಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡೋದು, ನಂತರ ಇಡೀ ಪ್ರಕರಣವನ್ನು ಮುಚ್ಚಿ ಹಾಕೋದು, ಮತ್ತೆ ಇನ್ನೊಂದು ಹಗರಣ ಬೆಳಕಿಗೆ ಬರುವವರೆಗೆ ಹಗರಣಗಳಲ್ಲಿ ಮುಳುಗುವುದು ದಿನನಿತ್ಯದ ವಿದ್ಯಮಾನವಾಗಿದೆ. ಇಷ್ಟು ದಿನ ಅಧಿಕಾರಿಗಳು, ಸಚಿವರ ಹೆಸರು ಭ್ರಷ್ಟಾಚಾರದಲ್ಲಿ ಕೇಳಿ ಬರುತ್ತಿತ್ತು. ಇದೀಗ ಸ್ವತಃ ಮುಖ್ಯಮಂತ್ರಿಗಳ ಕುಟುಂಬದವರ ಹೆಸರು ಮುನ್ನಲೆಗೆ ಬಂದಿದ್ದು ಭವಿಷ್ಯದಲ್ಲಿ ಈ ಕಾಂಗ್ರೆಸ್ಸಿಗರೆಲ್ಲ ಸೇರಿ ರಾಜ್ಯವನ್ನು ಯಾವ ಮಟ್ಟಿಗೆ ಲೂಟಿ ಹೊಡೆಯಲಿದ್ದಾರೆ ಎಂಬುದನ್ನು ಊಹಿಸಲೂ ಅಸಾಧ್ಯವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು, ಇಲ್ಲದಿದ್ದರೆ ಇಡೀ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article