Mangalore: ರೈಲ್ವೇ ಅಧಿಕಾರಿಗಳಿಗೆ ಕನ್ನಡ ಕಲಿಯಲು ಸಚಿವರು ಸೂಚನೆ
ಮಂಗಳೂರು: ರೈಲ್ವೇ ಇಲಾಖೆಯ ಅಧಿಕಾರಿಗಳು ಕನ್ನಡ ಕಲಿಯಬೇಕು ಎಂದು ಸೂಚನೆ ನೀಡಿದ ಸಚಿವ ವಿ. ಸೋಮಣ್ಣ, ತಾನು ಕೂಡಾ ಹಿಂದಿ ಭಾಷೆ ಓದಲು ಮತ್ತು ಬರೆಯಲು ಕಲಿಯುತ್ತಿದ್ದು, ಆರು ತಿಂಗಳಲ್ಲಿ ಕಾಗದ ಬರೆಯುವ ಜತೆಗೆ ಸಂಸತ್ತಿನಲ್ಲಿ ಹಿಂದಿಯಲ್ಲಿ ಮಾತನಾಡಲು ಸಿದ್ಧನಾಗುತ್ತಿದ್ದೇನೆ ಎಂದಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಮಂಗಳೂರು ರೈಲ್ವೇ ವಿಷಯಗಳ ಕುರಿತಂತೆ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಹಿಂದಿ ಹೇರಿಕೆ ವಿರುದ್ಧ ಪ್ರತಿಭಟಿಸಿದ್ದ ನನಗೆ ಈಗ ಭಾಷೆಯ ಅಗತ್ಯತೆಯ ಅರಿವಾಗಿದೆ. ಅಧಿಕಾರಿಗಳೂ ಕನ್ನಡ ಕಲಿತರೆ ಸ್ಥಳೀಯವಾಗಿ ಜನಪ್ರತಿನಿಧಿಗಳು ಹಾಗೂ ಜನರ ಜತೆ ವ್ಯವಹರಿಸಲು ಅನುಕೂಲವಾಗಲಿದೆ. ಜತೆಗೆ ಅಧಿಕಾರಿಗಳು ಇಲಾಖೆಯಿಂದ ಅನುಷ್ಠಾನಗೊಳ್ಳುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರೈಸಲು ಮುತವರ್ಜಿ ತೋರಿಸಬೇಕು ಎಂದರು.
ಪಾಂಡೇಶ್ವರ ರೈಲ್ವೇ ಕ್ರಾಸಿಂಗ್ನಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಆ ಪ್ರದೇಶದಲ್ಲಿ ರೈಲ್ವೇ ಮೇಲ್ಸೇತುವೆ ಅಥವಾ ಕೆಳಸೇತುವೆಯ ಅಧ್ಯಯನ ನಡೆಸಿ ಕ್ರಮ ವಹಿಸಲಾಗುವುದು. ಮಂಗಳೂರು ಸೆಂಟ್ರಲ್ ವಿಶ್ವದರ್ಜೆಯ ರೈಲ್ವೇ ಕೇಂದ್ರವನ್ನಾಗಿಸಲು ಪ್ರಕ್ರಿಯೆಗಳು ನಡೆಯುತ್ತಿದ್ದು, ೬ ತಿಂಗಳಲ್ಲಿ ಟೆಂಡರ್ ಆಗಿ, ಮುಂದಿನ ಮಾಚ್ರ್- ಎಪ್ರಿಲ್ನಲ್ಲಿ ಕಾಮಗಾರಿ
ಆರಂಭಗೊಳ್ಳಲಿದೆ. ಮೂರು ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ದಕ್ಷಿಣ ರೈಲ್ವೇ ಪ್ರಧಾನ ವ್ಯವಸ್ಥಾಪಕ ಆರ್.ಎನ್. ಸಿಂಗ್ ಹೇಳಿದರು.
ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲು ಟೆಂಡರ್ ಕರೆದು ಮುಂದಿನ ಮಾರ್ಚ್‌ನೊಳಗೆ ಕಾಮಗಾರಿ ಆರಂಭಿಸಲಾಗುವುದು. ಸುಮಾರು 300 ಕೋಟಿ ರೂ. ಗಳಲ್ಲಿ ನಡೆಯಲಿರುವ ಈ ಅಭಿವೃದ್ಧಿ ಕಾಮಗಾರಿಗಳು ೩ ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದು, ನಾನೇ ಸಚಿವನಾಗಿದ್ದಲ್ಲಿ ೨ ವರ್ಷಗೊಳಗೆ ಪೂರ್ಣಗೊಳಿಸಿ ಕೇಂದ್ರ ರೈಲ್ವೇ ಸಚಿವರಿಂದ ಉದ್ಘಾಟನೆ ನೆರವೇರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಎನ್‌ಎಂಪಿಟಿ, ಕೆಸಿಸಿಐ ಮತ್ತು ರಾಜ್ಯದ ಆರ್ಥಿಕತೆಯ ದೃಷ್ಟಿಯಿಂದ ಮಂಗಳೂರಿನಿಂದ ರಾಜ್ಯ ರಾಜಧಾನಿಯನ್ನು ರೈಲಿನಲ್ಲಿ ಸಂಪರ್ಕಿಸಲು ಪ್ರಸಕ್ತ 11 ಗಂಟೆಗಳು ಬೇಕು. ಸಮಯ ಕಡಿತಗೊಳಿಸುವ ಸಲುವಾಗಿ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಲು ಸಾಧ್ಯತೆ ಹಾಗೂ ಆರ್ಥಿಕ ಅಧ್ಯಯನ ಆಗಬೇಕು. ಮಂಗಳೂರು ಸುಬ್ರಹ್ಮಣ್ಯ ನಡುವೆ ಪ್ರಯಾಣಿಕ ರೈಲು ಪುನರಾರಂಭಿಸಬೇಕು. ರೈಲು ನಿಲ್ದಾಣದ ಮ್ಯಾನೇಜರ್ರಿಂದ ಕ್ಯಾಂಟೀನ್ ನಡೆಸಲು ಸ್ಥಳೀಯರಿಗೆ ಆದ್ಯತೆ ಅಥವಾ ಕನ್ನಡ ಬರುವವರಿಗೆ ಆದ್ಯತೆ ನೀಡಬೇಕು. ಮತ್ಸ್ಯಗಂಧ ರೈಲುಗಳ ಹಳೆ ಕೋಚ್‌ಗಳನ್ನು ಬದಲಾಯಿಸಬೇಕು ಮತ್ತು ಈ ರೈಲು ಮಂಗಳೂರು ಸೆಂಟ್ರಲ್‌ಗೆ ಬರುವಂತಾಗಬೇಕು ಎಂದು ಸಂಸದರು ಹೇಳಿದರು.