Mangalore: ನಿರ್ಮಾಣಗೊಳ್ಳದ ಅಂಬೇಡ್ಕರ್ ವೃತ್ತ: ದಲಿತ ನಾಯಕರ ಅಸಮಾಧಾನ

Mangalore: ನಿರ್ಮಾಣಗೊಳ್ಳದ ಅಂಬೇಡ್ಕರ್ ವೃತ್ತ: ದಲಿತ ನಾಯಕರ ಅಸಮಾಧಾನ


ಮಂಗಳೂರು: ನಗರದ ಹೃದಯ ಭಾಗದಲ್ಲಿ (ಹಿಂದಿನ ಜ್ಯೋತಿ ಟಾಕೀಸ್ ಎದುರು) ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ವೃತ್ತ ನಿರ್ಮಿಸಬೇಕೆಂಬ ದಲಿತ ಸಂಘಟನೆಗಳ ಹಲವು ವರ್ಷಗಳ ಬೇಡಿಕೆ ನನೆಗುದಿಗೆ ಬಿದ್ದಿದ್ದು, ತಾಪಂ ಕಚೇರಿಯಲ್ಲಿ ಶನಿವಾರ ನಡೆದ ದಲಿತ ಕುಂದುಕೊರತೆಗಳ ಸಭೆಯಲ್ಲೂ ದಲಿತ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು.

ಒಂದು ವಾರದೊಳಗೆ ವೃತ್ತಕ್ಕೆ ಸಂಬಂಧಿಸಿದ ಕಾಮಗಾರಿಗಳು ಆರಂಭಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ದಲಿತ ಮುಖಂಡರು ಸಭೆಯಲ್ಲಿ ನೀಡಿದರು. 

ಕಳೆದ ಹಲವು ವರ್ಷಗಳಿಂದ ದಲಿತ ಸಂಘಟನೆಗಳು, ನಾಯಕರು ಜಿಲ್ಲಾಡಳಿತ, ಶಾಸಕರು ಹಾಗೂ ಮನಪಾ ಆಡಳಿತಕ್ಕೆ ದೂರು, ಮನವಿಗಳನ್ನು ನೀಡುತ್ತಿದ್ದರೂ ಅಂಬೇಡ್ಕರ್ ವೃತ್ತ ನಿರ್ಮಾಣದ ಬಗ್ಗೆ ನಿರ್ಲಕ್ಷ್ಯ ತಾಳುವ ಮೂಲಕ ಸಮುದಾಯದ ಜತೆಗೆ ಸಂವಿಧಾನ ಶಿಲ್ಪಿಗೂ ಅವಮಾನ ಮಾಡಲಾಗಿದೆ ಎಂದು ಸಭೆಯಲ್ಲಿ ಜಿನ್ನಪ್ಪ ಬಂಗೇರ, ರಮೇಶ್ ಕೋಟ್ಯಾನ್, ಎಸ್.ಪಿ.ಆನಂದ, ಅಶೋಕ್ ಕೊಂಚಾಡಿ ಸೇರಿದಂತೆ ದಲಿತ ನಾಯಕರನೇಕರು ಆಕ್ರೋಶ ವ್ಯಕ್ತಪಡಿಸಿದರು. 

ನಗರದ ಮಂಗಳಾದೇವಿ, ಲೇಡಿಹಿಲ್, ನಂದಿಗುಡ್ಡೆ, ಕೊಡಿಯಾಲಬೈಲ್ ಮೊದಲಾದ ಕಡೆಗಳಲ್ಲಿ ವೃತ್ತ ನಿರ್ಮಾಣ ಆಗಿದೆ. ಮೇಲ್ವರ್ಗದವರ ಬೇಡಿಕೆ ಬಹು ಬೇಗ ಮಾನ್ಯವಾಗುತ್ತದೆ. ಆದರೆ ದಲಿತರ ಬೇಡಿಕೆಗೆ ಮಾತ್ರ ಯಾವುದೇ ಬೆಲೆ ಇಲ್ಲವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹೀಗಾಗುತ್ತಿದೆ. ಕಳೆದ ಆರು ತಿಂಗಳ ಹಿಂದೆಯೂ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಯಾವುದೇ ಕ್ರಮ ಆಗಿಲ್ಲ. ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ದೌರ್ಜನ್ಯ ಪ್ರಕರಣವನ್ನು ನಾವು ದಾಖಲಿಸಲಿದ್ದೇವೆ ಎಂದು ಜಿನ್ನಪ್ಪ ಬಂಗೇರ ಹಾಗೂ ರಮೇಶ್ ಕೋಟ್ಯಾನ್ ಅಸಮಾಧಾನ ವ್ಯಕ್ತಪಡಿಸಿದರು. 

ಕೆಲ ದಿನಗಳ ಹಿಂದೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜತೆ ನಾವು ಮಾತುಕತೆ ನಡೆಸಿದಾಗ ೪೦ ಲಕ್ಷ ರೂ. ಬಿಡುಗಡೆಯಾಗಿದ್ದು, ಮೂರು ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದಾರೆ. ಆದರೆ ೧೦ ದಿನಗಳಾದರೂ ಯಾವುದೇ ಕಾಮಗಾರಿ ಆರಂಭಿಸಿಲ್ಲ. ಪ್ರತಿ ಸಭೆಯಲ್ಲಿಯೂ ಸುಳ್ಳು ಭರವಸೆ ಮಾತ್ರ ಸಿಗುತ್ತಿರುವುದರಿಂದ ದೌರ್ಜನ್ಯ ಪ್ರಕರಣ ದಾಖಲಿಸುವ ಜತೆಗೆ ಒಂದು ವಾರದೊಳಗೆ ಕ್ರಮ ಆಗದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಎಸ್.ಪಿ. ಆನಂದ ಹೇಳಿದರು. 

ನಿಜಕ್ಕೂ ಇದು ಬೇಸರದ ಸಂಗತಿ. ಪ್ರತೀ ಬಾರಿ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪವಾಗುತ್ತಿದೆ. ಕಳೆದ ಆರು ತಿಂಗಳ ಹಿಂದೆ ಈ ಬಗ್ಗೆ ಮತ್ತೆ ಚರ್ಚೆಯಾಗಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದಾಗ ಅವರು ಹೇಳುತ್ತಿರುವಂತೆ ಇಚ್ಛಾಶಕ್ತಿ ಕೊರತೆಯ ಆರೋಪ ನಿಜವಾದಂತಾಗುತ್ತದೆ. ನಾಲ್ಕು ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಬೇಕು ಎಂದು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮನಪಾ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ವೃತ್ತ ನಿರ್ಮಾಣವಾಗುವ ಜಾಗದಲ್ಲಿ ಟ್ರಾಫಿಕ್ ಪೊಲೀಸರಿಗಾಗಿ ಇರಿಸಲಾಗಿರುವ ತಾತ್ಕಾಲಿಕ ಸ್ಟ್ಯಾಂಡ್ನಲ್ಲಿ ಬ್ಯಾಂಕ್ ನ ಜಾಹೀರಾತು ಇದ್ದು, ಅಂಬೇಡ್ಕರ್ ವೃತ್ತವೆಂಬ ಉಲ್ಲೇಖವಿಲ್ಲ. ಅದನ್ನು ತೆರವುಗೊಳಿಸಬೇಕು. ಹಾಗೂ ಸಮೀಪದಲ್ಲಿ ಅಂಬೇಡ್ಕರ್ ಪಾರ್ಕ್ ಗಾಗಿ ನಿಗದಿಪಡಿಸಿದ ಜಾಗದಲ್ಲಿ ಕಟೌಟ್ ಗಳನ್ನು ಹಾಕಿರುವುದನ್ನು ತೆರವುಗೊಳಿಸಬೇಕು ಎಂದು ದಲಿತ ನಾಯಕರು ಈ ಸಂದರ್ಭ ಮನವಿ ಮಾಡಿದರು. 

ಉರ್ವಾಸ್ಟೋರ್ ಬಳಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದ ಸುತ್ತ ಹುಲ್ಲು ಬೆಳೆದಿದ್ದು, ಟ್ರಾಫಿಕ್ ಪೊಲೀಸರ ಗುಜರಿ ತಾಣವಾಗಿ ಮಾರ್ಪಟ್ಟಿದೆ ಎಂದು ಸದಾಶಿವ ಉರ್ವಾಸ್ಟೋರ್ ಆರೋಪಿಸಿದಾಗ, ಹುಲ್ಲು ಸ್ವಚ್ಛಗೊಳಿಸಿ, ಅಲ್ಲಿರುವ ಗುಜುರಿ ವಾಹನಗಳನ್ನು ತೆರವುಗೊಳಿಸಬೇಕೆಂದು ತಹಶೀಲ್ದಾರ್ ಸೂಚನೆ ನೀಡಿದರು. 

ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article