
Mangalore: ಸಂಸದರ ಕಾರ್ಯಾಲಯ ಉದ್ಘಾಟನೆ
ಮಂಗಳೂರು: ನಗರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎರಡನೇ ಮಹಡಿಯಲ್ಲಿ ಶುಕ್ರವಾರ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಕಾರ್ಯಾಲಯ ಆರಂಭಗೊಂಡಿದೆ.
ಉದ್ಘಾಟಸಿದ ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ, ರಾಷ್ಟ್ರದ ಒಳಿತಿಗಾಗಿ ಯೋಧರು ಕಾರ್ಯನಿರ್ವಹಿಸಿದೆ, ಕ್ಷೇತ್ರದ ಅಭಿವೃದ್ಧಿಗಾಗಿ ಈ ಕ್ಯಾಪ್ಟನ್ ಕಾರ್ಯಬದ್ಧತೆ ಹೊಂದಿರುತ್ತಾರೆ ಎಂದರು.
ಇದು ಹಿಂದುತ್ವದ ಭೂಮಿಯಾಗಿದ್ದು, ದೈವ, ದೇವರ ಆರಾಧನೆಯ ಕ್ಷೇತ್ರವಾಗಿದೆ. ದೈವ, ದೇವರ ಆಶೀರ್ವಾದದಿಂದ ಓರ್ವ ಕ್ಯಾಪ್ಟನ್ ಯೋಧ ಜನತೆಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಜೊತೆಗೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಸಂಸತ್‌ನಲ್ಲಿ ಧ್ವನಿ ಎತ್ತಬೇಕು. ಸಂಸದರು ಬರೇ ಕುಳಿತುಕೊಳ್ಳಲು ಇರುವ ಆಸನ ಇದಲ್ಲ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜಾಗ ಇದು. ಅದಕ್ಕಾಗಿ ಈ ಕಚೇರಿ ತೆರೆಯಲಾಗಿದೆ. ಯೋಧರ ರೀತಿ ಇನ್ನು ಮುಂದೆ ಈ ಕ್ಯಾಪ್ಟನ್ ಕ್ಷೇತ್ರದ ಆಗುಹೋಗುಗಳಿಗೆ ತನ್ನನ್ನು ತಾನು ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಸಂಸದರ ಈ ಕಚೇರಿಯಿಂದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುದು ನಮ್ಮ ಅಪೇಕ್ಷೆ. ಅಂತಹ ಅವಕಾಶ ಒದಗಿಸುವ ಕೆಲಸವನ್ನು ನಿರಂತರ ಮಾಡಲಾಗುತ್ತದೆ. ತುಳುನಾಡಿನ ದೈವ, ದೇವರುಗಳ ಆಶೀರ್ವಾದ, ಸಂಘಟನೆ, ಕಾರ್ಯಕರ್ತರು, ಹಿಂದುತ್ವದ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪ್ರಧಾನಮಂತ್ರಿಗಳ ಆಶಯದ ವಿಕಸಿತ ಭಾರತಕ್ಕೆ ಪೂರಕವಾಗಿ ವಿಕಸಿತ ದಕ್ಷಿಣ ಕನ್ನಡ ನಿರ್ಮಾಣಕ್ಕೆ ದುಡಿಯುತ್ತೇನೆ. ಎಲ್ಲರ ಅಭಿಪ್ರಾಯ ಪಡೆದು ಮುಂದುವರಿಯುತ್ತೇನೆ ಎಂದು ಭರವಸೆ ನೀಡಿದರು.
ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಳೆದ ಮೂರು ದಶಕಗಳಿಂದ ದ.ಕ. ಕ್ಷೇತ್ರ ಬಿಜೆಪಿಯ ಪ್ರಬಲ ನೆಲೆಯಾಗಿದೆ. ನೂತನ ಸಂಸದರು ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂಬ ವಿಶ್ವಾಸವಿದೆ. ಜನರ ನೋವು, ನಲಿವಿಗೆ ಇದು ಸ್ಪಂದನಾ ಕೇಂದ್ರವಾಗಲಿದೆ. ಕ್ಷೇತ್ರದ ಅಭಿವೃದ್ಧಿಗೆ ಜನತೆ ಕ್ರಿಯಾಶೀಲ ಸಂಸದರಿಗೆ ಉತ್ತಮ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಡಾ.ಕಮಲಾ ಪ್ರಭಾಕರ ಭಟ್, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಬಾಲಕೃಷ್ಣ ಭಟ್, ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಯೋಗೀಶ್ ಭಟ್, ಪದ್ಮನಾಭ ಕೊಟ್ಟಾರಿ, ಮಲ್ಲಿಕಾ ಪ್ರಸಾದ್, ಮುಖಂಡರಾದ ನಿತಿನ್ ಕುಮಾರ್, ಸಾಜ ರಾಧಾಕೃಷ್ಣ ಆಳ್ವ, ಸಂದೇಶ್ ಶೆಟ್ಟಿ, ಚಂದ್ರಶೇಖರ ರಾವ್, ವಸಂತ ಪೂಜಾರಿ, ನಂದನ್ ಮಲ್ಯ, ಸುಜಿತ್ ಪ್ರತಾಪ್, ಬಿಜೆಪಿಯ ವಿವಿಧ ಮಂಡಲ ಪ್ರಮುಖರು, ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ಆಗಮಿಸಿ ಶುಭ ಹಾರೈಸಿದರು.