Mangalore: ಡಾ. ಭರತ್ ಶೆಟ್ಟಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸುವಂತೆ ಐವನ್ ಒತ್ತಾಯ

Mangalore: ಡಾ. ಭರತ್ ಶೆಟ್ಟಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸುವಂತೆ ಐವನ್ ಒತ್ತಾಯ


ಮಂಗಳೂರು: ಶಾಸಕ ಡಾ. ಭರತ್ ಶೆಟ್ಟಿಯವರು ರಾಹುಲ್ ಗಾಂಧಿ ಬಗ್ಗೆ ಅವಾಚ್ಯವಾಗಿ ಮಾತನಾಡುವ ಜತೆಗೆ ಶಸ್ತ್ರಾಸ್ತ್ರ ಹಿಡಿಯುವ ಬಗ್ಗೆ ಪ್ರಚೋದ ನಕಾರಿಯಾಗಿ ಮಾತನಾಡಿದ್ದು ಪೊಲೀಸ್ ಆಯುಕ್ತರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಬಂಧನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭರತ್ ಶೆಟ್ಟಿ ಒಬ್ಬ ಚಿಲ್ಲರೆ ರಾಜಕಾರಣಿ. ಸಂಸ್ಕೃತಿ ಇಲ್ಲದ ರಾಜಕಾರಣಿ.  ಶಾಸಕ ಸ್ಥಾನಕ್ಕೆ ಅಗೌರವ ತೋರಿಸಿ ಶಾಸಕರ ಮಾನ ಹರಾಜು ಮಾಡಿದ್ದಾರೆ. ಶಾಸಕನಾಗಲೂ ಅವರಿಗೆ ಅರ್ಹತೆ ಇಲ್ಲ. ರಾಹುಲ್ ಗಾಂಧಿಯರಿಗೆ ‘ಕೆನ್ನೆಗೆ ಬಾರಿಸಬೇಕು’  ಎಂದು ಹೇಳುವುದರ ಜತೆಗೆ ‘ನಾಯಿ’ಗೆ ಹೋಲಿಕೆ ಮಾಡಿದ್ದಾರೆ. ನಾಯಿಗೆ ಇರುವ ಬುದ್ಧಿಯೂ ಶಾಸಕರಿಗೆ ಇಲ್ಲ ಆರೋಪಿಸಿದರು.

ರಾಹುಲ್ ಗಾಂಧಿಯವರು ಏನು ಹೇಳಿದ್ದಾರೆ ಎಂದು ಜ್ಯೋತಿರ್ಮಠದ 46ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮಿ ಅವರ ಮಾತುಗಳೇ ಸಾಕ್ಷಿ  ಹೇಳುತ್ತದೆ. ನಾನೂ 5 ಬಾರಿ ಅವರ ಭಾಷಣವನ್ನು ಕೇಳಿದ್ದೇನೆ. ಅವರು ಎಲ್ಲ ಧರ್ಮದ ಸಾರವನ್ನು ಹೇಳಿದ್ದಾರೆ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಧರ್ಮದ ವಿಚಾರದಲ್ಲಿ ರಾಜಕೀಯವನ್ನು ನಿಲ್ಲಿಸಬೇಕು ಎಂದುಅವರು ವಿರೋಧ ಪಕ್ಷದ ನಾಯಕನಾಗಿ ತಮ್ಮ ನಿಲುವು ಹೇಳಿದ್ದಾರೆ.

ಸ್ವತಃ ಪ್ರಧಾನಿಯವರಿಗೇ ರಾಹುಲ್ ಗಾಂಧಿಯವರನ್ನು ಎದುರಿಸಲು ತಾಕತ್ತಿಲ್ಲ, ಇನ್ನು ಚಿಲ್ಲರೆ ಗಿರಾಕಿಯಾಗಿರುವ ಭರತ್ ಶೆಟ್ಟಿಯಾವ ಲೆಕ್ಕ. ತಾಕತ್ತಿದ್ದರೆ ಅವರಿಗೆ ಹೊಡೆದು ನೋಡಲಿ. ಸೌಹಾರ್ದಯುತವಾದ ದ.ಕ. ಜಿಲ್ಲೆ ಕೋಮು ಸೂಕ್ಷ್ಮ ಜಿಲ್ಲೆ ಎಂದು ಹೆಸರು ಪಡೆಯಲು ಕೂಡಾ ಬಿಜೆಪಿಯವರೇ ಕಾರಣ ಎಂದು ಆರೋಪಿಸಿದರು. ಲೋಕ ಸಭಾ ಚುನಾವಣೆಯಲ್ಲಿ ಜನತೆ ನೀಡಿರುವ ತೀರ್ಪಿನಿಂದ ಅವರು ಶಾಕ್ ಆಗಿದ್ದಾರೆ. ಮೋದಿ ಸೋತು ಗೆದ್ದವರು, ಆದರೆ ರಾಹುಲ್ 5 ಲಕ್ಷಕ್ಕಿಂತ ಹೆಚ್ಚಿನ ಮತಗಳಿಂದ ಗೆದ್ದಿದ್ದಾರೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಖಾತೆಯನ್ನೇ ತೆರೆದಿಲ್ಲ. ಮುಂದಿನ ಆರು ತಿಂಗಳು ಕೂಡಾ ಕೇಂದ್ರ ಸರಕಾರ ಉಳಿಯುವುದಿಲ್ಲ. ಅದಕ್ಕೆ ಹಾದಿ ಬೀದಿಯಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ರಾಹುಲ್ ವಿರೋಧ ಪಕ್ಷದ ನಾಯಕಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಂಗಾಲಾಗಿದೆ ಎಂದರು.

ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಮಾತನಾಡಿ, ಬಿಜೆಪಿಯರು ತಮ್ಮ ಹಿಂದುತ್ವ ಏನು ಎಂದು ಸ್ಪಷ್ಟಪಡಿಸಬೇಕು. ಶಸ್ತ್ರಾಸ್ತ್ರ ಹಿಡಿಯುವುದು ಹಿಂದುತ್ವವಾಗಿದ್ದರೆ, ಹಿಂದು ಧರ್ಮದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಅರ್ಥ. ಇದನ್ನೇ ರಾಹುಲ್ ಗಾಂಧಿಯವರು ಗಾಂಧಿಯವರು ಹೇಳಿದ್ದು. ಮುಂದಿನ ಚುನಾವಣೆಯಲ್ಲಿ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜ ಅವರಿಗೆ ಟಿಕೆಟ್ ದೊರೆಯುವುದಿಲ್ಲ. ಅದಕ್ಕೆ ಈಗಲೇ ಅನಂತ ಕುಮಾರ್ ಹೆಗಡೆ ರೀತಿಯಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಗಲಭೆ ಆಗಲೆಂದೇ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಮಾತನಾಡಿದವರು ಹೀರೋ ಆಗುವುದಿಲ್ಲ ಬದಲಾಗಿ ಝೀರೋ ಆಗುತ್ತಾರೆ. ಅನಂತ ಕುಮಾರ್ ಹೆಗಡೆಗೆ ಆದ ಗತಿಯೇ ಇಲ್ಲಿನ ಶಾಸಕರಿಗೂ ಆಗಲಿದೆ ಎಂದರು.

ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಕೆ. ಅಶ್ರಫ್, ಪ್ರಕಾಶ್ ಸಾಲ್ಯಾನ್, ಸುಹಾನ್ ಆಳ್ವ, ಪ್ರಕಾಶ್ ಸಾಲಿಯಾನ್, ಬೇಬಿ ಕುಂದರ್, ಜೆ. ಅಬ್ದುಲ್ ಸಲೀಂ, ಅಪ್ಪಿ, ಟಿ. ಹೊನ್ನಯ್ಯ, ಭಾಸ್ಕರ ರಾವ್, ಶುಭೋದಯ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article