.jpeg)
Mangalore: ಸರ್ಕ್ಯೂಟ್ ಹೌಸ್ ಬಿಜೈ ರಸ್ತೆಗೆ ಜಾರ್ಜ್ ಫೆರ್ನಾಂಡಿಸ್ ಹೆಸರು: ಸುಧೀರ್ ಶೆಟ್ಟಿ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿನ ಸರ್ಕ್ಯೂಟ್ ಹೌಸ್ ಬಳಿಯಿಂದ ಬಿಜೈ ವೃತ್ತದವರೆಗಿನ ರಸ್ತೆಗೆ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಿಡಲು ಸರಕಾರದ ಅನುಮೋದನೆ ದೊರಕಿದ್ದು, ಜುಲೈ 6ರಂದು ಸಂಜೆ 4 ಗಂಟೆಗೆ ಬಿಜೈ ವೃತ್ತದ ಬಳಿ ಉದ್ಘಾಟನಾ ಕಾಯಕ್ರಮ ನಡೆಯಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಘನ ಉಪಸ್ಥಿತಿ ವಹಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಅಧ್ಯಕ್ಷತೆ ವಹಿಸುವರು. ಬಿಜೈ ಚರ್ಚ್‌ನ ಧರ್ಮಗುರು ರೆ.ಫಾ.ಜೆ.ಬಿ.ಸಲ್ಡಾನ್ಹಾ ಆಶೀರ್ವಚನ ನೀಡಲಿದ್ದು, ವಿಶೇಷ ಅತಿಥಿಗಳಾಗಿ ಜಾರ್ಜ್ ಫೆನಾಂಡಿಸ್ ಅವರ ಸಹೋದರ ಮೈಕಲ್ ಫೆರ್ನಾಂಡಿಸ್ ಭಾಗವಹಿಸುವರು ಎಂದರು.
ಕಾರ್ಮಿಕರ ಧ್ವನಿಯಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ಬಿಜೈ ರಸ್ತೆಗೆ ಇಡುವ ಕುರಿತಂತೆ ಪ್ರೇಮಾನಂದ ಶೆಟ್ಟಿ ಅವರು ಮೇಯರ್ ಆಗಿದ್ದಾಗ ಪ್ರಸ್ತಾವನೆ ಸಲ್ಲಿಸಿದ್ದೆ, ಬಳಿಕ ಪಾಲಿಕೆ ಅನುಮೋದನೆಯೊಂದಿಗೆ ಸರಕಾರಕ್ಕೆ ಕಳುಹಿಸಲಾಗಿತ್ತು. ಇದೀಗ ಸರಕಾರದ ಒಪ್ಪಿಗೆ ದೊರೆತಿದೆ ಎಂದವರು ಹೇಳಿದರು.
ಫೆರ್ನಾಂಡಿಸ್ ಅವರು ಬಿಜೈ ಭಾಗದವರಾದ ಕಾರಣ ಅಲ್ಲಿನ ರಸ್ತೆಗೆ ಹೆಸರಿಡಲು ತೀರ್ಮಾನ ಮಾಡಲಾಗಿದೆ. ರಕ್ಷಣಾ ಸಚಿವರಾಗಿ ಅವರ ಕೊಡುಗೆ ಬಹಳಷ್ಟು ಇದೆ. ಮಂಗಳೂರು -ಮುಂಬೈ ರೈಲ್ವೆ ಸಂಚಾರ ಆರಂಭವಾಗುವಲ್ಲಿ ಅವರ ಕೊಡುಗೆ ಬಹಳಷ್ಟಿದೆ. ಅವರು ದೂರದೃಷ್ಠಿಯ ನಾಯಕ ಎಂದು ಹೇಳಿದರು.
ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಿಡುವ ಕುರಿತಂತೆ ಯಾವ ರಾಜಕೀಯವೂ ಇಲ್ಲ. ಪಾಲಿಕೆ ಸಮ್ಮತಿಯೊಂದಿಗೆ ಸರಕಾರಕ್ಕೆ ಕಳುಹಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಡಾ.ವೈ.ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಎಸ್.ಎಲ್.ಭೋಜೇಗೌಡ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಉಪಮೇಯರ್ ಸುನೀತಾ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್, ಗಣೇಶ್ ಕುಲಾಲ್, ಲೋಹಿತ್ ಅಮೀನ್ ಉಪಸ್ಥಿತರಿದ್ದರು.