
Mangalore: ಪತಿ ಕೊಲೆಗೆ ಸುಫಾರಿ-ಐವರಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ಪತಿಯ ಕೊಲೆಗೆ ಸುಪಾರಿ ನೀಡಿದ್ದ ಆರೋಪ ಎದುರಿಸುತ್ತಿದ್ದ ಪತ್ನಿ ಸಹಿತ 5 ಮಂದಿ ಆರೋಪಿಗಳಿಗೆ ಮಂಗಳೂರಿನ 6ನೇ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಪಾವೂರು ಗ್ರಾಮದ ಇನೋಳಿಯ ನೆಬಿಸಾ (40), ಬಿ.ಸಿ.ರೋಡ್‌ನ ಅಬ್ದುಲ್ ಮುನಾಫ್ ಯಾನೆ ಮುನ್ನ (41), ಉಳ್ಳಾಲದ ಅಬ್ದುಲ್ ರಹಿಮಾನ್ (೩೬), ಬೋಳಿಯಾರಿನ ಶಬೀರ್ ಯಾನೆ ಶಬ್ಬಿ (31), ಕುತ್ತಾರ್ ಪದವಿನ ಜಮಾಲ್ ಅಹ್ಮದ್ (38) ಶಿಕ್ಷೆಗೊಳಗಾದ ಆರೋಪಿಗಳು. ಪಾವೂರು ಗ್ರಾಮದ ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್ (59) ಕೊಲೆಯಾದ ವ್ಯಕ್ತಿ.
ವಿವರ..
ಇನೋಳಿಯ ಇಸ್ಮಾಯಿಲ್‌ಗೆ ನೆಬಿಸಾ ಜತೆ ಎರಡನೇ ಮದುವೆಯಾಗಿದ್ದು, ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಪತ್ನಿ ನೆಬಿಸಾ ಕುತ್ತಾರ್ ಪದವಿನ ಜಮಾಲ್ ಅಹ್ಮದ್ ಜತೆ ಅನ್ಯೋನ್ಯವಾಗಿರುವುದನ್ನು ತಿಳಿದ ಇಸ್ಮಾಯಿಲ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಮತ್ತು ಈ ವಿಚಾರದಲ್ಲಿ ದಂಪತಿಯ ಮಧ್ಯೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಈ ಮಧ್ಯೆ ಜಮಾಲ್ ಜತೆ ಸೇರಿಕೊಂಡ ನೆಬಿಸಾ ತನ್ನ ಪತಿ ಇಸ್ಮಾಯಿಲ್‌ನನ್ನು ಕೊಲೆ ಮಾಡಲು ನಿರ್ಧರಿಸಿ, ಅಬ್ದುಲ್ ರಹಿಮಾನ್ ಎಂಬಾತನ ಜತೆ ಸೇರಿ ದೇರಳಕಟ್ಟೆ ಗ್ರೀನ್ಲ್ಯಾಂಡ್ ಗ್ರೌಂಡ್ ಬಳಿ ಸಂಚು ರೂಪಿಸಿದ್ದರು ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದರು.
2016ರ ಫೆ.16ರಂದು ಸಂಜೆ ಆರೋಪಿ ಅಬ್ದುಲ್ ರಹಿಮಾನ್ ಬೆಂಗಳೂರಿಗೆ ಬಾಡಿಗೆಯಿದೆ ಎಂದು ಹೇಳಿ ಇಸ್ಮಾಯಿಲ್‌ನನ್ನು ನಂಬಿಸಿ ಫರಂಗಿಪೇಟೆಯಿಂದ ಕರೆದೊಯ್ದಿದ್ದ. ಬಳಿಕ ಬಿ.ಸಿ.ರೋಡ್ ಬಳಿ ಆರೋಪಿಗಳಾದ ಮುನಾಫ್ ಮತ್ತು ಶಬೀರ್‌ನನ್ನು ಅದೇ ವಾಹನಕ್ಕೆ ಹತ್ತಿಸಿ ಶಿರಾಡಿಯತ್ತ ಕರೆದೊಯ್ದ. ನಂತರ ರಕ್ಷಿತಾರಣ್ಯದೊಳಗೆ ಇಸ್ಮಾಯೀಲ್ರನ್ನು ಕರೆದೊಯ್ದು ಚೂರಿಯಿಂದ ಇರಿದು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಪತಿಯ ಕೊಲೆಗೆ ಸುಪಾರಿ ಕೊಟ್ಟ ಆರೋಪಿ ನೆಬಿಸಾ ತನ್ನ ಮೇಲೆ ಅನುಮಾನ ಬಾರದಿರಲೆಂದು 2016ರ ಫೆ.17ರಂದು ಪತಿ ಇಸ್ಮಾಯೀಲ್ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕೃತ್ಯದಲ್ಲಿ ಭಾಗಿಯಾದ ನೆಬಿಸಾ ಸಹಿತ ಐವರು ಆರೋಪಿಗಳನ್ನು ಬಂಧಿಸಿದ್ದರು.
ವಿಚಾರಣೆ ನಡೆಸಿದ ೬ನೇ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜ ಎಸ್.ವಿ. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಸಹಿತ 2 ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ 2 ವರ್ಷ ಸಜೆ, ಸಾಕ್ಷ್ಯ ನಾಶದಡಿ 7 ವರ್ಷ ಕಠಿಣ ಸಜೆ ಮತ್ತು 1ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1ವರ್ಷ ಸಾದಾ ಸಜೆ, ಒಳಸಂಚು ಪ್ರಕರಣದಡಿ 7 ವರ್ಷ ಕಠಿಣ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇಸ್ಮಾಯಿಲ್ ಮತ್ತು ನೆಬಿಸಾ ದಂಪತಿಯ ನಾಲ್ಕು ಮಂದಿ ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಲು ತೀರ್ಪಿನಲ್ಲಿ ಸೂಚಿಸಿದೆ.
ಕೊಣಾಜೆ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರೆ, ಸರಕಾರಿ ಅಭಿಯೋಜಕಿಯರಾದ ಜುಡಿತ್ ಎಂ.ಒ. ಕ್ರಾಸ್ತಾ ಮತ್ತು ಜ್ಯೋತಿ ಪಿ. ನಾಯಕ್ ಸಾಕ್ಷಿಗಳ ವಿಚಾರಣೆ ನಡೆಸಿದರು. ಸರಕಾರಿ ಅಭಿಯೋಜಕ ಬಿ. ಶೇಖರ್ ಶೆಟ್ಟಿ ಮತ್ತು ಚೌಧರಿ ಮೋತಿಲಾಲ್ ವಾದ ಮಂಡಿಸಿದರು.