ಎನ್‌ಡಿಎ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ: ರಮಾನಾಥ ರೈ
Tuesday, July 23, 2024
ಮಂಗಳೂರು: ಇದು ದೇಶದ ಬಜೆಟ್ ಎಂದು ಅನಿಸುತ್ತಿಲ್ಲ. ಮೋದಿ ಸರಕಾರ ತನ್ನ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಬಿಹಾರ, ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ಕೊಟ್ಟಿದ್ದು ಬಿಜೆಪಿಯೇತರ ರಾಜ್ಯಗಳನ್ನು ಕಡೆಗಣಿಸಿದೆ. ಎನ್‌ಡಿಎ ಸರಕಾರಕ್ಕೆ 17+2 ಸಂಸದರನ್ನು ನೀಡಿರುವ ಕರ್ನಾಟಕಕ್ಕೆ ಮತ್ತೊಮ್ಮೆ ಮೋದಿ ಸರಕಾರ ಖಾಲಿ ಚೊಂಬು ಕೊಟ್ಟು ಅನ್ಯಾಯ ಮಾಡಿದೆ. ಕರ್ನಾಟಕಕ್ಕೆ ಈ ಬಜೆಟ್‌ನಲ್ಲಿ ಸಿಕ್ಕಿರುವುದು ಶೂನ್ಯ. ಈ ರೀತಿ ಕರ್ನಾಟಕವನ್ನು ಯಾರೂ ಕಡೆಗಣಿಸಿರಲಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೆನೆಗುದಿಗೆ ಬಿದ್ದಿರುವ ರಾಜ್ಯದ ಹಲವು ನೀರಾವರಿ ಯೋಜನೆ ಮತ್ತು ರೈಲ್ವೇ ಯೋಜನೆಗಳ ಪೈಕಿ ಯಾವುದೇ ಯೋಜನೆಗಳಿಗೂ ನಯಾಪೈಸೆ ಅನುದಾನ ಕೊಟ್ಟಿಲ್ಲ. ರಾಜ್ಯಕ್ಕೆ ಒಂದೇ ಒಂದು ಹೊಸ ಯೋಜನೆ ಘೋಷಿಸಿಲ್ಲ. ಬಿಜೆಪಿಯನ್ನು ಸತತ ಮೂರು ದಶಕಗಳಿಂದ ಗೆಲ್ಲಿಸುತ್ತಿರುವ ಕರಾವಳಿಗೂ ಈ ಬಜೆಟ್‌ನಲ್ಲಿ ದ್ರೋಹ ಆಗಿದೆ. ಮಂಗಳೂರನ್ನು ಪ್ರತ್ಯೇಕ ರೈಲ್ವೇ ವಿಭಾಗ ಮಾಡುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೆಗೆ ಸೇರಿಸಬೇಕೆಂಬ ಬೇಡಿಕೆಯನ್ನೂ ಈಡೇರಿಸಿಲ್ಲ. ನಿಸ್ಸಂಶಯವಾಗಿ ಈ ಬಜೆಟ್ ಕರ್ನಾಟಕಕ್ಕೆ ಮಹಾ ದ್ರೋಹ ಎಸಗಿದ ಬಜೆಟ್ ಎಂದು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.