Putturu: ಜು.19: ಪುತ್ತೂರಿನಲ್ಲಿ ಕಾರ್ಗಿಲ್ ವಿಜಯದ ಬೆಳ್ಳಿಹಬ್ಬ-ಕಾರ್ಗಿಲ್ ಯೋಧರಾದ ಕ್ಯಾ.ಯೋಗೀಂದ್ರ ಸಿಂಗ್-ಕ್ಯಾ.ನವೀನ್ ಭಾಗಿ
ಪುತ್ತೂರು: ಕಾರ್ಗಿಲ್ ವಿಜಯೋತ್ಸವದ ಬೆಳ್ಳಹಬ್ಬ ಆಚರಣೆಯ ಹಿನ್ನಲೆಯಲ್ಲಿ ಪುತ್ತೂರಿಗೆ ಜು.19 ರಂದು ಕಾರ್ಗಿಲ್ ವೀರರಾದ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪರಮವೀರಚಕ್ರ ಪುರಸ್ಕೃತ ಕ್ಯಾ. ಯೋಗೀಂದ್ರ ಸಿಂಗ್ ಯಾದವ್ ಹಾಗೂ ಕೊಡಗಿನ ಕುವರ ಕ್ಯಾ. ನವೀನ್ ನಾಗಪ್ಪ ಅವರು ಪುತ್ತೂರಿಗೆ ಆಗಮಿಸಲಿದ್ದು, ಕಿಲ್ಲೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ `ಕದನಕಲಿ'ಗಳಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಪುತ್ತೂರು ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕಾರ್ಯಕ್ರಮ ನಡೆಯಲಿದೆ ಎಂದು ಎಂ.ಕೆ. ನಾರಾಯಣ ಭಟ್ ತಿಳಿಸಿದರು.
ಸೋಮವಾರ ಪುತ್ತೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ತನ್ನ ದೇಹಕ್ಕೆ 17 ಗುಂಡು ತಗುಲಿದ್ದರೂ ಲೆಕ್ಕಿಸದೆ ವೈರಿಗಳೊಂದಿಗೆ ಹೋರಾಡಿದ ಕ್ಯಾ.ಯೋಗೀಂದ್ರ ಸಿಂಗ್ ಯಾದವ್ ಮತ್ತು ಕಾರ್ಗಿಲ್ ಯುದ್ಧದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡು ಹೋರಾಡಿದ ವೀರ ಯೋಧ ಕ್ಯಾ. ನವೀನ್ ನಾಗಪ್ಪ ಅವರನ್ನು 9.30 ಗಂಟೆಗೆ ದರ್ಬೆ ವೃತ್ತದಿಂದ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಗುವುದು. ಕಿಲ್ಲೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ವರ್ಷಪೂರ್ತಿ ಉರಿಯುವ ದಕ್ಷಿಣ ಭಾರತದಲ್ಲಿಯೇ ಏಕೈಕ ಅಮರ ಜವಾನ್ ಜ್ಯೋತಿ ಸ್ಮಾರಕ ಪುತ್ತೂರಿನ ಕಿಲ್ಲೆ ಮೈದಾನದ ಪಕ್ಕದಲ್ಲಿ 2017ರಲ್ಲಿ ಸ್ಥಾಪನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಸೈನಿಕ ಸಂಘದ ಮಾಜಿ ಅಧ್ಯಕ್ಷ ಎಂ.ಕೆ. ನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾ.ಯೋಗೀಂದ್ರ ಸಿಂಗ್ ಯಾದವ್,ಕ್ಯಾ. ನವೀನ್ ನಾಗಪ್ಪ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ ಶೆಟ್ಟಿ, ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ನಗರಸಭೆಯ ಆಯುಕ್ತ ಮಧು ಎಸ್ ಮನೋಹರ್ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅಂಬಿಕಾ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಸೈನಿಕರ ಸಂಘದ ಅಧ್ಯಕ್ಷ ಜೋ.ಡಿಸೋಜ ಮತ್ತು ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.