Putturu: ಐರಾವತದಲ್ಲಿ ಬೆಂಕಿ-ತಪ್ಪಿದ ಅನಾಹುತ
ಪುತ್ತೂರು: ಉಪ್ಪಿನಂಗಡಿ ಹಳೆಗೇಟು ಬಳಿ ಕೆಎಸ್‌ಆರ್‌ಟಿಸಿ ಐರಾವತ ಬಸ್ಸೊಂದದರಲ್ಲಿ ಗುರುವಾರ ಬೆಳಗ್ಗೆ ಪ್ರಯಾಣ ನಡುವೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಹಾಗೂ ಸ್ಥಳೀಯರ ಸಕಾಲಿಕ ಸ್ಪಂದನೆಯಿಂದ ಸಂಭಾವ್ಯ ಹೆಚ್ಚಿನ ಅನಾಹುತ ತಪ್ಪಿದೆ. ಬೆಂಗಳೂರಿನಿಂದ-ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿ ಯಲ್ಲಿ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ತಕ್ಷಣ ಹಳೇಗೇಟು ಬಳಿ ಬಸ್ಸು ನಿಲ್ಲಿಸಿದ್ದಾರೆ.
ಆಗ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿ ಇಸಾಕ್ ಹಾಗೂ ಸ್ಥಳೀಯ ಯುವಕರು ನೆರವಿಗೆ ಧಾವಿಸಿದ್ದಾರೆ.
ಏರ್ ಫಿಲ್ಟರ್‌ನಲ್ಲಿ ಸಣ್ಣ ಪ್ರಮಾಣದ ಸಮಸ್ಯೆ ಕಾಣಿಸಿಕೊಂಡಿದೆ. ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕ ರಿಸ್ಕ್ ತೆಗೆದುಕೊಳ್ಳದೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಪ್ರಯಾಣಿಕರು ಪ್ರಯಾಣ ಮುಂದುವರಿಸಲು ಹಿಂದಿನ ಬಸ್ಸಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಸ್ ಅನ್ನು ಪರಿಶೀಲನೆಗೆ ಕಳುಹಿಸಿ ಕೊಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.