ಕಾರ್ಗಿಲ್ ವಿಜಯೋತ್ಸವದ ಇಪ್ಪತ್ತೈದನೆಯ ವರ್ಷಾಚರಣೆ-ಕ್ಯಾ. ಯೋಗೀಂದ್ರ ಸಿಂಗ್ ಯಾದವ್-ಕ್ಯಾ. ನವೀನ್ ನಾಗಪ್ಪ ಅವರಿಗೆ ಗೌರವಾರ್ಪಣೆ
ಪುತ್ತೂರು: ಸೈನಿಕ ರಾಷ್ಟ್ರದ ವಿಶ್ವಾಸ ಹಾಗೂ ಭರವಸೆ. ನಾನು ಇದ್ದರೂ, ಇಲ್ಲವಾದರೂ ನನ್ನ ರಾಷ್ಟ್ರ ಉಳಿಯಬೇಕು ಎನ್ನುವುದು ಸೈನಿಕನ ಸಂಕಲ್ಪವಾಗಿರುತ್ತದೆ. ಸ್ಪಷ್ಟ ಗುರಿ ಮತ್ತು ನಿರ್ಧಾರ ಆತನ ಬದ್ಧತೆಯಾಗಿರುತ್ತದೆ ಎಂದು ಪರಮವೀರ ಪುರಸ್ಕೃತ ಕಾರ್ಗಿಲ್ ಯೋಧ ಕ್ಯಾ. ಯೋಗೀಂದ್ರ ಸಿಂಗ್ ಯಾದವ್ ಹೇಳಿದರು.
ಪುತ್ತೂರಿನ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಲಾದ ಕಾರ್ಗಿಲ್ ವಿಜಯೋತ್ಸವದ ಇಪ್ಪತ್ತೈದನೆಯ ವರ್ಷಾಚರಣೆಯಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ತನ್ನ ಕಾಲುಗಳನ್ನು ಕಳೆದುಕೊಂಡ ಹುಬ್ಬಳ್ಳಿಯ ಯೋಧ ಕ್ಯಾ. ನವೀನ್ ನಾಗಪ್ಪ ಮಾತನಾಡಿ, ಪಾಕಿಸ್ಥಾನಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನ್ಯ ಕೊಟ್ಟ ಹೊಡೆದ ಎಷ್ಟು ತೀವ್ರವಾಗಿತ್ತೆಂದರೆ ಅನಂತರದ ಈ ಇಪ್ಪತ್ತೈದು ವರ್ಷಗಳಲ್ಲಿ ಪಾಕಿಸ್ಥಾನ ಅಂತಹ ಯುದ್ಧಕ್ಕೆ ಬರುವ ಧೈರ್ಯವನ್ನೇ ತೋರಿಸಿಲ್ಲ. ಭಾರತೀಯ ಸೈನಿಕರು ನೈತಿಕ ಹಾದಿಯಲ್ಲೇ ಮುಂದುವರೆಯುತ್ತಾರೆಂಬುದೇ ಬಹುದೊಡ್ಡ ಆತ್ಮಶಕ್ತಿ. ಪಾಕಿಸ್ಥಾನ ತನ್ನ ಯೋಧರು ಸತ್ತಾಗ ಹೆಣವನ್ನೂ ಸ್ವೀಕರಿಸಲಿಲ್ಲ. ಆಗ ಭಾರತೀಯ ಸೈನಿಕರೇ ಆ ಸೈನಿಕರನ್ನು ಅವರ ಧರ್ಮಕ್ಕನುಗುಣವಾಗಿ, ಅವರ ರಾಷ್ಟ್ರಧ್ವಜ ಹೊದೆಸಿ ದಫನ ಮಾಡಿದ್ದು ಇಲ್ಲಿಯ ಸಂಸ್ಕಾರದ ಪ್ರತಿರೂಪ ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ. ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಲಾ ಟಿ. ಶೆಟ್ಟಿ, ನಗರ ಸಭಾ ಆಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಗಿಲ್ ಯೋಧರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.
ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು. ನ್ಯಾಯವಾದಿ ಮಹೇಶ್ ಕಜೆ ವಂದಿಸಿ, ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು.
ಸಾವಿನ ಬಾಗಿಲಲ್ಲೂ ಹೋರಾಟದ ಕೆಚ್ಚು:
ಪಾಕಿಸ್ಥಾನದ ಸೈನಿಕರು ನಮ್ಮ ಮೇಲೆರಗಿ ಒಂದೇ ಸಮನೆ ಗುಂಡಿನ ದಾಳಿ ಮಾಡಿದರು. ಜತೆಗಿದ್ದ ಅಷ್ಟೂ ಮಂದಿ ಸೈನಿಕರು ಸ್ಥಳದಲ್ಲೇ ಮೃತಪಟ್ಟರೆ ತಾನು ಸತ್ತಂತೆ ನಟಿಸುತ್ತಾ ಬಿದ್ದಿದ್ದೆ. ಸತ್ತವರ ಮೇಲೆ ಮತ್ತೆ ಮತ್ತೆ ಗುಂಡಿನ ಸುರಿಮಳೆಯಾಗುತ್ತಿತ್ತು. ಆ ದಾಳಿಯಲ್ಲಿ ಕಾಲುಗಳು ಛಿದ್ರವಾದವು. ಆದರೂ ತುಟಿಪಿಟಕ್ಕೆನ್ನದೆ ಸಾವನ್ನು ಹತ್ತಿರದಿಂದ ಕಂಡು ಮನಸ್ಸು ಗಟ್ಟಿ ಮಾಡಿ ಕೈಯಲ್ಲಿದ್ದ ಗ್ರೆನೇಡ್ ಎಸೆದು ಪಾಕಿಸ್ಥಾನದ ಸೈನಿಕರನ್ನು ಸುಟ್ಟುಹಾಕಿದೆ. ಇದ್ದಕ್ಕಿದ್ದಂತೆ ದಾಳಿಯಾದದ್ದನ್ನು ಕಂಡ ಪಾಕಿಸ್ಥಾನಿ ಸೈನಿಕರು ಭಾರತದ ಮತ್ತೊಂದು ಸೇನಾ ತುಕಡಿ ತಮ್ಮನ್ನು ಆಕ್ರಮಿಸುತ್ತಿದೆ ಎಂದು ಭಾವಿಸಿ ಓಡತೊಡಗಿದರು. ರೈಫಲ್ ತೆಗೆದು ಮತ್ತೆ ಐದು ಜನ ಪಾಕಿಸ್ಥಾನದ ಸೈನಿಕರನ್ನು ಹೊಡೆದುಹಾಕಿದೆ. -ಕ್ಯಾ. ಯೋಗೀಂದ್ರ ಸಿಂಗ್ ಯಾದವ್