
Udupi: ಜಾತಿ ನಿಂದನೆ-8 ಮಂದಿ ವಿರುದ್ಧ ಪ್ರಕರಣ ದಾಖಲು
ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿರುದ್ದ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 8 ಮಂದಿಯ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಲಿತ ನಿಂದನೆ ಪ್ರಕರಣ ದಾಖಲಾಗಿದೆ.
ಶೋಭಾ ಎಂಬವರು ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದು ಜೂನ್ 28ರಂದು ಪಿಡಿಒ ದಯಾನಂದ ಅವರು ಎಸ್‌ಎಲ್‌ಆರ್‌ಎಮ್ ಘಟಕದಲ್ಲಿ ನೀರಿನ ಹರಿವಿಗೆ ಅಡಚಣೆಯಾಗಿರುವ ಕಾರಣಕ್ಕೆ ಸ್ಥಳಕ್ಕೆ ಬರುವಂತೆ ಹೇಳಿದ ಹಿನ್ನಲೆಯಲ್ಲಿ ಸಂಜೆ 5 ಗಂಟೆಗೆ ತೆಂಕನಿಡಿಯೂರು ಸ್ಮಶಾನದ ಬಳಿಯ ಎಸ್‌ಎಲ್‌ಆರ್‌ಎಮ್ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಬಂದ ಸಂದರ್ಭ ಆರೋಪಿಗಳಾದ ಶರತ್ ಬೈಲಕೆರೆ, ಕಿರಣ ಪಿಂಟೊ, ವಿಜಯಪ್ರಕಾಶ್, ಗಾಯತ್ರಿ, ಪುಷ್ಪ ಶಾಲಿನಿ, ಕೃಷ್ಣ ಶೆಟ್ಟಿ ಹಾಗೂ ಇತರರು ಸೇರಿ ಏಕವಚನದಲ್ಲಿ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ಶೋಭಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರಿಂದ ಉಸಿರಾಟದ ತೊಂದರೆ ಕೂಡ ಆಗಿದೆ. ಶೋಭಾ ಅವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಬೇಕೆಂಬ ಉದ್ದೇಶವಿಟ್ಟುಕೊಂಡು ಈ ಕೃತ್ಯ ನಡೆಸಿದ್ದಾರೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.