ನಿರಂತರ ಮಳೆ: ಬೆಂಗಳೂರು-ಮಂಗಳೂರು ಸಂಪರ್ಕ ಭಾಗಶಃ ಕಡಿತ-ಚಾರ್ಮಾಡಿಗೆ ಘಾಟ್ ನಲ್ಲಿ ಹೆಚ್ಚಿದ ವಾಹನ
ಉಜಿರೆ: ಕಳೆದ 4-5 ದಿನಗಳಿಂದ ಕರಾವಳಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ತತ್ತರವಾಗಿದೆ. ಬೆಂಗಳೂರು-ಮಂಗಳೂರು ನಡುವಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.
ಶಿರಾಡಿ ಘಾಟಿ ದೊಡ್ಡತಪ್ಲು ಎಂಬಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಅತ್ತ ಮಡಿಕೇರಿ-ಸಂಪಾಜೆ ಘಾಟಿಯಲ್ಲಿ ಭೂಕುಸಿತದ ಆತಂಕ ಹಿನ್ನೆಲೆಯಲ್ಲಿ ರಾತ್ರಿ 8 ರಿಂದ ಬೆಳಗ್ಗೆ 6ರ ವರೆಗೆ 3 ದಿನಗಳ ಕಾಲ ಸಂಚಾರ ನಿಷೇಧಿಸಿ ಮಡಿಕೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರಿನ ಕೊಟ್ಟಿಗೆಹಾರ ಮೂಲಕ ಸಾಗುವ ಚಾರ್ಮಾಡಿ ಘಾಟಿಯೊಂದೇ ಸದ್ಯ ಮಂಗಳೂರು-ಬೆಂಗಳೂರು ಸಂಪರ್ಕಕ್ಕೆ ಉಳಿದುಕೊಂಡಿದೆ. ಅಲ್ಲಲ್ಲಿ ರಸ್ತೆ ಹಾಗೂ ತಡೆಗೋಡೆ ಬಿರುಕು ಬಿಟ್ಟಿದ್ದು, ಮಿತಿ ಮೀರಿ ವಾಹನಗಳು ಸಂಚರಿಸಿದರೆ ಅಪಾಯವುಂಟಾಗುವ ಸಂಭವವಿದೆ. ಸದ್ಯ ರೈಲು ಸಂಚಾರಕ್ಕೆ ಈವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಕಾರ್ಕಳ-ಶೃಂಗೇರಿ ಸಂಪರ್ಕ ರಸ್ತೆಯನ್ನು ಕೂಡ ಸಂಚಾರಕ್ಕೆ ಮುಚ್ಚಲಾಗಿದೆ.
ನಿರಂತರ ಸುರಿಯುತ್ತಿರುವ ಮಳೆಗೆ ವೇಣೂರು ಮಹಾವೀರ ನಗರದಿಂದ ಮೂಡುಕೋಡಿ ಗ್ರಾಮದ ಪರಾರಿ ಸಂಪರ್ಕಿಸುವ ನೂತನ ಸೇತುವೆ ಮುಳುಗಡೆ ಆಗಿದೆ. ಇದರಲ್ಲಿ ವಾಹನ ಸಂಚಾರ ಇಲ್ಲದೆ ಇರುವುದರಿಂದ ಯಾರಿಗೂ ತೊಂದರೆ ಆಗಿಲ್ಲ. ಸ್ಥಳೀಯ ತೋಟ, ಗದ್ದೆ ಹಾಗೂ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು ಸ್ನಾನಘಟ್ಟ ಮುಳುಗಿದ ಕಾರಣ ಯಾತ್ರಿಕರು ಸ್ನಾನಕ್ಕೆ ನೀರಿಗಿಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಬಂದಾರು ಗ್ರಾಮದ ಕುಂಟಾ ಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿತದಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಬಂದಾರು-ಕುಂಟಾ ಲಪಲ್ಕೆ-ಪೆರ್ಲ-ಬೈಪಾಡಿ ಸಂಚರಿಸುವ ವಾಹನಗಳು ಮೈರೋಳ್ತಡ್ಕ-ಶಿವನಗರ-ಪೆರ್ಲ ಬೈಪಾಡಿ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಚಾರ್ಮಾಡಿ ಎ.ಬಿ. ಫಾರೂಕ್ ಎಂಬವರ ಮನೆಯ ಗೋಡೆ ಕುಸಿದಿದೆ. ಬೆಳ್ತಂಗಡಿ ಬಿಷಪ್ ಹೌಸ್ ಸಮೀಪ ತೋಟಕ್ಕೆ ನದಿ ನೀರು ನುಗ್ಗಿದೆ. ಶಿರ್ಲಾಲ್ ಅಂತರಂಗೆ ಪಾಲನೆ ಭಾಸ್ಕರ್ ಸಾಲಿಯಾನ್ ಅವರ ಮನೆ ಹಿಂಬದಿ ಗುಡ್ಡ ಕುಸಿದಿದೆ.
ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಒತ್ತಡ:
ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆಯನ್ನು ತಾತ್ಕಾಲಿಕ ಮುಚ್ಚಿರುವ ಕಾರಣ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಒತ್ತಡ ಹೆಚ್ಚಿದೆ. ಶಿರಾಡಿ ಮೂಲಕ ಧರ್ಮಸ್ಥಳ, ಪುತ್ತೂರು, ಮಂಗಳೂರು ಹಾಗೂ ಇತರ ಡಿಪೋದಿಂದ ಬೆಂಗಳೂರು ಹಾಗೂ ಇತರಡೆ ಸಂಚರಿಸುವ ನೂರಾರು ಕೆಂಪು ಬಸ್ಸುಗಳಿಗೆ ಸದ್ಯ ಚಾರ್ಮಾಡಿ ಘಾಟಿ ಪ್ರಮುಖ ಸಂಚಾರ ಮಾರ್ಗವಾಗಿದೆ. ಶಿರಾಡಿ ಮೂಲಕ ಜಿಲ್ಲೆಗೆ ಆಗಮಿಸುವ ಹಾಗೂ ನಿರ್ಗಮಿಸುವ ಖಾಸಗಿ ಹಾಗೂ ಲಘು ವಾಹನಗಳು ಚಾರ್ಮಾಡಿ ಮೂಲಕವೇ ಸಂಚರಿಸಬೇಕು. ಚಾರ್ಮಾಡಿ ಘಾಟಿಯಲ್ಲಿ ನಿಗದಿ ಪಡಿಸಿದ ಆರು ಚಕ್ರದವರೆಗಿನ ವಾಹನಗಳಿಗೆ ಮಾತ್ರ ಪ್ರವೇಶಾವಕಾಶವಿದೆ. ಆದರೆ ರಾಜಹಂಸ, ಐರಾವತ, ಸ್ಲೀಪರ್ ಬಸ್ ಗಳಿಗೆ ಚಾರ್ಮಾಡಿ ಘಾಟಿಯಲ್ಲಿ ಸಂಚಾರಕ್ಕೆ ಅವಕಾಶವಿಲ್ಲ.
ಶಿರಾಡಿ ಘಾಟ್ ಮೂಲಕ ಪ್ರತಿದಿನ ಓಡಾಟ ನಡೆಸುವ ಬಸ್ಸುಗಳು, ಸರಕು ವಾಹನಗಳ ಸಹಿತ ಸಾವಿರಾರು ವಾಹನಗಳು ಚಾರ್ಮಾಡಿ ಮೂಲಕ ಓಡಾಡುವ ಕಾರಣ ಘಾಟಿ ಹಾಗೂ ಘಾಟಿ ರಸ್ತೆಯ ಒತ್ತಡ ಹೆಚ್ಚಲಿದ್ದು ಯಾವುದೇ ಸಂದರ್ಭದಲ್ಲಿ ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ. ಘಾಟಿ ಭಾಗದಲ್ಲಿ ಸದಾ ಮಂಜು ಕವಿದ ವಾತಾವರಣ, ಜಲಪಾತ, ಹಳ್ಳ ತೊರೆಗಳ ಸೌಂದರ್ಯವನ್ನು ಆಸ್ವಾದಿಸಲು ಮಾರ್ಗ ಮಧ್ಯೆ ವಾಹನ ನಿಲ್ಲಿಸುವ ಪ್ರವಾಸಿಗರು ಜಲಪಾತಗಳ ಸುತ್ತಮುತ್ತ ನಡು ರಸ್ತೆಯಲ್ಲಿ ನಿಲ್ಲುವ ಜನರು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದಾರೆ. ಕಡಿಮೆ ವಾಹನ ಒತ್ತಡ ಸಮಯ ಹೈರಾಣ ಆಗುವ ವಾಹನ ಸವಾರರು ಹೆಚ್ಚಿನ ವಾಹನ ಒತ್ತಡದಿಂದ ಇನ್ನಷ್ಟು ಸಮಸ್ಯೆ ಎದುರಿಸಲಿದ್ದಾರೆ. ಕೆಲವೆಡೆ ಅಗಲ ಕಿರಿದಾಗಿರುವ ರಸ್ತೆಯಲ್ಲಿ ಎರಡು ಬಸ್ಸುಗಳು ಏಕಕಾಲದಲ್ಲಿ ಸಂಚರಿಸುವಷ್ಟು ಜಾಗವಿಲ್ಲದ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆಯುಂಟಾಗುವ ಸಂಭ್ಯಾವವಿದೆ. ಯಾವುದೇ ಸಂದರ್ಭದಲ್ಲಿ ಗುಡ್ಡ ಕುಸಿತವುಂಟಾದರೆ ಚಾರ್ಮಾಡಿ ಘಾಟ್ ರಸ್ತೆ ಕೂಡ ಸಂಚಾರ ಕಡಿತಗೊಳ್ಳುವ ಸಂಭವವಿದೆ. ರಾತ್ರಿ ವೇಳೆ ವಾಹನ ಸಂಚಾರ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
