
Ullal: ಟೋಲ್ ಪ್ಲಾಝಾ ಸುತ್ತಲ ಅಂಗಡಿ ತೆರವಿಗೆಅಡ್ಡಿ-ಜು-.20 ರ ವರೆಗೆ ಗಡುವು ನೀಡಿದ ಅಧಿಕಾರಿ
ಉಳ್ಳಾಲ: ತಲಪಾಡಿ ಟೋಲ್ ಪ್ಲಾಝಾ ಸುತ್ತ ನಿರ್ಮಿಸಲಾದ ಅಂಗಡಿಗಳನ್ನು ತೆರವುಗೊಳಿಸಲು ಇಂದು ನವಯುಗ ಉಡುಪಿ ಟೋಲ್ ವೇ ಪ್ರೈ.ಲಿ ಸಂಸ್ಥೆ ಸಿಬ್ಬಂದಿ ಜೆಸಿಬಿ ಹಾಗೂ ಕ್ರೇನ್ ಮೂಲಕ ಮುಂದಾಗಿದ್ದು, ಸ್ಥಳೀಯರು ಹಾಗೂ ತಲಪಾಡಿ ಗ್ರಾ.ಪಂ ಸದಸ್ಯರು ಸೇರಿಕೊಂಡು ಸಂಸ್ಥೆ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜು.20 ರ ಒಳಗೆ ಅಂಗಡಿ ಸಾಮಾನುಗಳನ್ನು ತೆರವುಗೊಳಿಸಿದೇ ಇದ್ದಲ್ಲಿ ನೆಲಸಮಗೊಳಿಸುವ ಎಚ್ಚರಿಕೆ ನೀಡಿ ಕಾರ್ಯಾಚರಣೆಯನ್ನು ಇಂದು ಸ್ಥಗಿತಗೊಳಿಸಿದ್ದಾರೆ.
ಕುಂದಾಪುರದಿಂದ ತಲಪಾಡಿವರೆಗಿನ ರಾ.ಹೆ.ಯಲ್ಲಿರುವ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಲು ಸುಪ್ರೀಂ ಕೋಟ್೯ ಆದೇಶಿಸಿದೆ. 2024 ರ ಮಾಚ್೯ ತಿಂಗಳಿನಲ್ಲಿ ಆದೇಶ ಬಂದಿತ್ತು. ಅದರಂತೆ ವ್ಯಾಪಾರಿಗಳಿಗೆ ಅಂಗಡಿ ತೆರವು ಗೊಳಿಸಲು ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಗಿತ್ತು. ಆದರೂ ಅವರು ಅಂಗಡಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಮಾಚ್೯ ತಿಂಗಳಲ್ಲಿ ಅಂಗಡಿ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟೀಸು ನೀಡಲಾಗಿತ್ತು. ನೋಟೀಸು ನೀಡಿ ಮೂರು ತಿಂಗಳು ಕಳೆದರೂ, ಕೆಲವರು ಅಂಗಡಿಗಳನ್ನು ಒಳಬಾಡಿಗೆಗೆ ನೀಡಿ ಮೋಸ ಮಾಡಿದರೆ, ಕೆಲವರು ಲಕ್ಷಾಂತರ ಬೆಲೆಗೆ ಮಾರಾಟವನ್ನೇ ಮಾಡಿದ್ದಾರೆ. ಇನ್ನು ಕೆಲವರು ಅಂಗಡಿಗಳಲ್ಲೇ ಉಳಿದಿದ್ದರು. ಮತ್ತೆ ಸುಪ್ರೀಂ ಕೋಟ್೯ ಪ್ರಶ್ನಿಸುವ ಮುನ್ನ ಕಾರ್ಯಾಚರಣೆ ನಡೆದಿದೆ.
ಸುಪ್ರೀಂ ಕೋರ್ಟಿನ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಹಾಕಿರುವ ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಬೇಕಿದೆ. ಎಪ್ರಿಲ್ ತಿಂಗಳಲ್ಲೇ ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಮಾನವೀಯತೆ ನೆಲೆಯಲ್ಲಿ ತಡ ಮಾಡಿ ಇಂದು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಇದೀಗ ಸ್ಥಳೀಯರ ಹಾಗೂ ಅಂಗಡಿ ಮಾಲೀಕರ ಮನವಿಯ ಮೇರೆಗೆ ಜು.20 ರ ವರೆಗೆ ಗಡುವು ನೀಡಲಾಗಿದೆ.
ನೋಟೀಸ್ ಎರಡು ಬಾರಿ ನೀಡಲಾಗಿದೆ:
ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಮಾಡಿರುವ ಮನವಿಗೆ ಸ್ಪಂಧಿಸಿ ಗಡುವು ನೀಡಿ, ಸಹಿ ಪಡೆಯಲಾಗಿದೆ. 150 ಅಂಗಡಿಗಳಷ್ಟು ಗೂಡಂಗಡಿ ಇಟ್ಟವರು ಒಳಬಾಡಿಗೆಗೆ ಕೊಟ್ಟವರಿದ್ದಾರೆ. ಇನ್ನು ಹಲವರು ನ್ಯಾಯಾಲಯದ ಆದೇಶ ಬರುತ್ತಿದ್ದಂತೆ 1ರಿಂದ 3 ಲಕ್ಷ ರೂ.ಗೆ ಮಾರಿ ಹೋದವರಿದ್ದಾರೆ. ಬಡವರನ್ನು ಮೋಸ ಮಾಡಿದ ಅನೇಕ ಪ್ರಕರಣಗಳಿವೆ. ಸದ್ಯ ಉಡುಪಿ ಟೋಲ್ ಗೇಟ್ ಪ್ರೈ.ಲಿ ಸಂಸ್ಥೆ ರಾ.ಹೆ.ಗುತ್ತಿಗೆಯನ್ನು ವಹಿಸಿದ್ದು, ಡಿಸೈನ್ ಒಳಗೆ ಬರುವಂತಹ ಎಲ್ಲಾ ಕಾಮಗಾರಿಗಳನ್ನು ಸಂಸ್ಥೆ ಕೈಗೆತ್ತಿಕೊಂಡಿದ್ದು, ಹೆದ್ದಾರಿ ಬದಿಯ ದಾರಿದೀಪಗಳನ್ನು ಎಲ್‌ಇಡಿಗೆ ಪರಿವರ್ತನೆಗೊಳಿಸಲಾಗುವುದು. ತೊಕ್ಕೊಟ್ಟು ಜಂಕ್ಷನ್ ಸರ್ವಿಸ್ ರಸ್ತೆ, ಚರಂಡಿ ಕಾಮಗಾರಿಯ ಕುರಿತು ಈ ಮಳೆಗಾಲದಲ್ಲಿ ವರದಿ ಸಂಗ್ರಹಿಸಿ ಮುಂದಿನ ಮಳೆಗಾಲದ ಸಂದರ್ಭ ದುರಸ್ತಿಗೊಳಿಸಲಾಗುವುದು. ಅಂಡರ್ ಪಾಸ್ ಕುರಿತು ಗುತ್ತಿಗೆ ಸಂಸ್ಥೆಗೆ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಜನರ ದೂರುಗಳನ್ನು ಇಲಾಖೆಗೆ ತಿಳಿಯಪಡಿಸುತ್ತೇವೆ. ಯೋಜನೆ ಅನುಷ್ಠಾನಗೊಂಡಲ್ಲಿ ರಚನೆಗೆ ಸಂಸ್ಥೆ ಸಿದ್ಧವಾಗಿದೆ. ತಿಮ್ಮಯ್ಯ, ಹಿರಿಯ ಪ್ರಬಂಧಕರು, ನವಯುಗ ಉಡುಪಿ ಟೋಲ್ ವೇ ಪ್ರೈ.ಲಿ ಸಂಸ್ಥೆ
ತಲಪಾಡಿ ಟೋಲ್ ಪ್ಲಾಝಾ ಸಮೀಪ:
ಬಲವಂತದಿಂದ ಅಂಗಡಿ ತೆರವು ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸ್ಥಳೀಯರು ಸೇರಿಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಸಮಯವಕಾಶ ಕೇಳಿದ್ದೇವೆ. ಕಳೆದ ೨೨ ವರ್ಷಗಳಿಂದ ಹಾಲಿನ ಅಂಗಡಿ ಇಲ್ಲಿದೆ. ತೆರವು ಕಾರ್ಯಾಚರಣೆಯಲ್ಲಿ ಇಲಾಖೆ ತಾರತಮ್ಯ ತೋರದೆ ಗೂಡಂಗಡಿ ಮಾಲೀಕರಿಗೆ ಮಾತ್ರವಲ್ಲ ಎಲ್ಲರಿಗೂ ಒಂದೇ ಕಾನೂನು ಎಂಬುದನ್ನು ತೋರಿಸಿ ಕಾರ್ಯಾಚರಣೆ ನಡೆಸಲಿ. -ಸಿದ್ದೀಖ್ ತಲಪಾಡಿ, ಗಡಿನಾಡು ರಕ್ಷಣಾ ವೇದಿಕೆ