Ullal: ಜೆಡಿಎಸ್‌ನಿಂದ ದೂರ ಸರಿದ ಮತ್ತಿಬ್ಬರು ಕೌನ್ಸಿಲರ್‌ಗಳು
ಉಳ್ಳಾಲ: ಉಳ್ಳಾಲ ನಗರ ಸಭೆ ಕೌನ್ಸಿಲರ್ ಜೆಡಿಎಸ್ ಸದಸ್ಯ ದಿನಕರ್ ಉಳ್ಳಾಲ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನಗರ ಸಭೆಯ ಇನ್ನಿಬ್ಬರು ಜೆಡಿಎಸ್ ಕೌನ್ಸಿಲರ್‌ಗಳಾದ ಅಬ್ದುಲ್ ಜಬ್ಬಾರ್ ಹಾಗೂ ಖಲೀಲ್ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು , ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ.
ಈ ವಿದ್ಯಮಾನ ದಿಂದ ಉಳ್ಳಾಲದಲ್ಲಿ ಜೆಡಿಎಸ್ ಪಕ್ಷ ನೆಲೆ ಕಳೆದು ಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದು ಇದರೊಂದಿಗೆ ನಗರ ಸಭೆಯಲ್ಲಿ ಈಗ ಜೆಡಿಎಸ್‌ನಲ್ಲಿ ಒಂಟಿ ಸದಸ್ಯ ಬಷೀರ್ ಮಾತ್ರ ಉಳಿದು ಕೊಂಡಿದ್ದಾರೆ.
ಈ ಬಗ್ಗೆ ಜಬ್ಬಾರ್ ಅವರನ್ನು ಸಂಪರ್ಕಿಸಿದಾಗ ನಾಯಕರೇ ಇಲ್ಲದ ಸಮಯದಲ್ಲಿ ಉಳ್ಳಾಲ ದಲ್ಲಿ ಸ್ಪರ್ಧಿಸಿ ಕಷ್ಟಪಟ್ಟು ನಾಲ್ಕು ಸ್ಥಾನಗಳನ್ನು ಜೆಡಿಎಸ್‌ಗೆ ತಂದಿದ್ದೇವೆ. ಈಗ ನಮ್ಮನ್ನು ಕೇಳುವ ಜೆಡಿಎಸ್ ನಾಯಕರೇ ಇಲ್ಲ. ಪಕ್ಷಕ್ಕಿಂತ ಅಭಿವೃದ್ಧಿ ಮುಖ್ಯ. ಈ ಕಾರಣದಿಂದ ಜೆಡಿಎಸ್‌ನಿಂದ ದೂರ ಸರಿದು ಶಾಸಕರ ಜತೆ ಕೈಜೋಡಿಸಿದ್ದೇವೆ ಎಂದು ತಿಳಿಸಿದರು.
ಕೌನ್ಸಿಲರ್ ಖಲೀಲ್ ಅವರು ,ನಮ್ಮ ಕೆರೆಯನ್ನು ಸ್ವೀಕರಿಸುವ ಜೆಡಿಎಸ್ ಮುಖಂಡ ಇಲ್ಲ,ಅವರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಬಿ.ಎಂ. ಫಾರೂಕು ಕೂಡ ಸ್ಪಂದನೆ ಮಾಡುವುದಿಲ್ಲ. ಒಟ್ಟಿನಲ್ಲಿ ಜೆಡಿಎಸ್ ನಾಯಕರು ಯಾರೆಂದು ಗೊತ್ತಾಗುತ್ತಿಲ್ಲ. ಶಾಸಕ ಖಾದರ್ ಅವರಿಂದ ನನ್ನ ಕ್ಷೇತ್ರದಲ್ಲಿ ಕೆಲಸ ಆಗಿದೆ. ಈ ಕಾರಣದಿಂದ ಅವರಿಗೆ ಬೆಂಬಲ ನೀಡಲಿದ್ದೇವೆ ಎಂದು ಹೇಳಿದರು.
ಒಟ್ಟಿನಲ್ಲಿ ನಗರ ಸಭೆ ನಾಲ್ಕು ಜೆಡಿಎಸ್ ಕೌನ್ಸಿಲರ್‌ಗಳ ಪೈಕಿ ಮೂರು ಜೆಡಿಎಸ್ ಕೌನ್ಸಿಲರ್‌ಗಳು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಈ ಪೈಕಿ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ಕೊಡುವ ಜೆಡಿಎಸ್ ಕೌನ್ಸಿಲರ್ ಬಷೀರ್‌ರವರ ಮುಂದಿನ ನಿಲುವು ಏನೆಂಬುದು ಪ್ರಶ್ನೆಯಾಗಿದೆ.
ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ಕೌನ್ಸಿಲರ್ ಖಲೀಲ್‌ರವರು ಯು.ಟಿ. ಖಾದರ್ ಪರ ಕೆಲಸ ಮಾಡಿ ಸಾಕಷ್ಟು ಸುದ್ದಿ ಮಾಡಿದ್ದರು.
ಜೆಡಿಎಸ್ ಸದಸ್ಯ ಜಬ್ಬಾರ್‌ರವರು ಕೂಡ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ವಿರುದ್ಧವಾಗಿ ಕೆಲಸ ಮಾಡಿದ್ದರು.