ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ


ಉಡುಪಿ: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ತನಿಖೆಗೊಳಪಡಿಸಲು ಆದೇಶ ನೀಡಿದ ರಾಜ್ಯಪಾಲರ ನಡೆಯ ವಿರುದ್ಧ ಕಾಂಗ್ರೆಸ್ ಕಾರ‍್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯಪಾಲರು ಸಂವಿಧಾನವನ್ನು ಗಾಳಿಗೆ ತೂರಿ, ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಸಾಮಾನ್ಯವಾಗಿ ವಿಚಾರಣೆ ನಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗುತ್ತದೆ. ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿಸುವ ಪ್ರಯತ್ನ ನಡೆಯದು. ನ್ಯಾಯಾಂಗದ ಮೇಲೆ ನಮಗೆ ಭರವಸೆ ಇದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ರಾಜ್ಯಪಾಲರನ್ನು ಬಳಸಿಕೊಂಡು ಸರಕಾರದ ಅಸ್ಥಿರಗೊಳಿಸಲು ಬಿಜೆಪಿ ಕೈಹಾಕಿದೆ. ಅಮಿಷ್ ಶಾ ಅವರ ಏಜೆಂಟ್‌ನಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಅವರು ಅನುಮತಿ ನೀಡುವುದಾದರೆ ಎಚ್.ಡಿ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಿ ಎಂದು ಸವಾಲೆಸೆದರು. ಪ್ರತಿಭಟನೆಯನ್ನು ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲೂ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಗೋಪಾಲ್ ಪೂಜಾರಿ, ಮುಖಂಡರಾದ ಉದಯ್ ಶೆಟ್ಟಿ ಮುನಿಯಾಲು, ಪ್ರಸಾದ್‌ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ಕಾಂಗ್ರೆಸ್ ಭವನದಿಂದ ಆರಂಭವಾದ ಪಾದಯಾತ್ರೆ ಜೋಡುಕಟ್ಟೆ ವರೆಗೆ ತೆರಳಿ, ವಾಪಾಸು ಬ್ರಹ್ಮಗಿರಿ ವೃತ್ತದಲ್ಲಿ ಸಮಾಪನವಾಯಿತು. ಜಿಲ್ಲೆಯ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಬಳಿಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಮನವಿ ಸ್ವೀಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article