
ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಕಾಸರಗೋಡು: ಮಾಫಿಯಾ ಗ್ಯಾಂಗ್‌ಗಳ ಅಡ್ಡೆಯಾಗಿ ಪರಿಣಮಿಸಿರುವ ಗೃಹ ಇಲಾಖೆ ಹೊಣೆ ಹೊತ್ತಿರುವ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮುಸ್ಲಿಂ ಯೂತ್ ಲೀಗ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವಠಾರದಲ್ಲಿ ಇಂದು ಧರಣಿ ನಡೆಯಿತು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಧರಣಿ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಪೊಲೀಸರು ವಶಪಡಿಸಿಕೊಳ್ಳುವ ಹವಾಲಾ ಹಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ, ವಂಚಿಸಲಾಗುತ್ತಿದೆ. ಪೊಲೀಸ್ ಇಲಾಖೆಯನ್ನು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಜೀಜ್ ಕಳತ್ತೂರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಕೆ.ಎಂ.ಅಶ್ರಫ್, ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು, ಕಾರ್ಯದರ್ಶಿ ಫಾತಿಮಾ ತಹ್ಲಿಯಾ, ಮುಸ್ಲಿಂ ಲೀಗ್ ಜಿಲ್ಲಾ ಕೋಶಾಧಿಕಾರಿ ಪಿ.ಎಂ.ಮುನೀರ್ ಹಾಜಿ, ಕಾರ್ಯದರ್ಶಿ ಹಾರಿಸ್ ಚೂರಿ, ಟಿ.ಡಿ.ಕಬೀರ್, ಯೂಸುಫ್ ಉಳುವಾರ್, ಎಂ.ಬಿ.ಶಾನವಾಜ್, ಟಿ.ಎಂ.ಇಕ್ಬಾಲ್ ಉಪಸ್ಥಿತರಿದ್ದರು. ಯೂತ್ಲೀಗ್ ಪ್ರಧಾನ ಕಾರ್ಯದರ್ಶಿ ಜಹೀರ್ ಆಸಿಫ್ ಸ್ವಾಗತಿಸಿದರು.
ಉಳಿಯತ್ತಡ್ಕ ಜಂಕ್ಷನ್ನಿಂದ ನೂರಾರು ಮಂದಿ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿ ಎದುರು ಧರಣಿ ನಡೆಸಿದರು. ಪೊಲೀಸರು ಬ್ಯಾರಿಕೇಡ್ ಹಾಕಿ ಕಾರ್ಯಕರ್ತರನ್ನು ತಡೆಗಟ್ಟಿದರು. ಪ್ರತಿಭಟನಾಕಾರರು ಬ್ಯಾರಿಕೇಡ್ ದಾಟಿ ಮುಂದಕ್ಕೆ ಸಾಗಲು ಯತ್ನಿಸುತ್ತಿದ್ದಂತೆ ಜಲಫಿರಂಗಿ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಲಾಯಿತು.