
ಶಕ್ತಿ ವಸತಿ ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ
ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿರುವ ರೇಷ್ಮಾ ಮೆಮೋರಿಯಲ್ ಸಂಭಾಂಗಣದಲ್ಲಿ 155ನೇ ಗಾಂಧಿಜಯಂತಿಯನ್ನು ಮತ್ತು ಲಾಲ್ಬಹದ್ದೂರ್ ಶಾಸ್ತ್ರಿಯವರ 120ನೇ ಜಯಂತಿಯನ್ನು ಆಚರಿಸಲಾಯಿತು.
ಭಾರತ ಕಂಡ ಹೆಮ್ಮೆಯ ಮಹಾನ್ ನಾಯಕರುಗಳಾದ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವಾದ ಇಂದು, ಮಕ್ಕಳೆಲ್ಲರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಪ್ರಜೆಗಳಿಗೆ ಮಾದರಿಯಾದ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ಜಗತ್ತಿಗೆ ಪರಿಚಿತರಾದ ಲಾಲ್ ಬಹದ್ದೂರ್ ಶಾಸ್ತ್ರಿಗಳ ಆದರ್ಶಗಳನ್ನು ಪಾಲಿಸಬೇಕು. ಮಕ್ಕಳು ಶಾಲೆಗಳಲ್ಲಿ ಇಂತಹ ಮಹಾನ್ ನಾಯಕರ ತತ್ವಗಳನ್ನು ಓದುವ ಮೂಲಕ ಅಹಿಂಸೆಯ ಕಡೆ ವಾಲುತ್ತಿದ್ದಾರೆ. ಭಾರತ ಕಸ ಮುಕ್ತ ರಾಷ್ಟ್ರವಾಗುವ ಸ್ವಚ್ಚ ಭಾರತದ ಕನಸು ಕಂಡ ಗಾಂಧೀಜಿ ಅವರ ತತ್ವದಿಂದ ಇಂದು ಭಾರತವೇ ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿಸಿಕೊಂಡಿದೆ ಎಂದು ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಹೇಳಿದರು.
ಭಾರತ್ ಸ್ಕೌಟ್-ಗೈಡ್, ಕಬ್ ಬುಲ್-ಬುಲ್ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೆಲ್ಲರೂ ಸೇರಿ ಧರ್ಮ ಗ್ರಂಥಗಳ ಪಠಣವನ್ನು ಮಾಡುವ ಮೂಲಕ ಸರ್ವ ಧರ್ಮ ಪ್ರಾರ್ಥನೆಯನ್ನು ನೆರವೇರಿಸಿದರು.
ಶಿಕ್ಷಕ ಶರಣಪ್ಪ ಅವರು ಮನ್ ಕಿ ಸ್ವಚ್ಛತಾ ಎಂಬ ವಿಷಯದ ಕುರಿತು ಮಾತನಾಡಿ, ‘ನೀ ಬಯಸುವ ಸಮಾಜದ ಬದಲಾವಣೆ ಮೊದಲು ನೀನಾಗಿ ತೋರಿಸು’ ಎಂಬ ಗಾಂಧೀಜಿ ಅವರ ಮಾತಿನಂತೆ, ಮೊದಲು ನಮ್ಮ ಮನಸ್ಸನ್ನು ಬದಲಾಯಿಸೋಣ ನಂತರ ಸಮಾಜದ ಬದಲಾವಣೆ ಬಯಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷಯನ್ನು ವಹಿಸಿದ್ದ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಅವರು ಮಾತನಾಡಿ, ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಜಾತಿ, ಭೇದ-ಭಾವವನ್ನು ಮೊದಲು ನಾವು ಹೋಗಲಾಡಿಸುವತ್ತ ಇಂದು ಯಶಸ್ವಿಯಾಗಿದ್ದೇವೆ. ಇಂದು ಅತೀ ಹೆಚ್ಚು ಮಾನವ ಸಂಪತ್ತನ್ನು ಹೊಂದಿರುವ ರಾಷ್ಟ್ರ ನಮ್ಮ ಭಾರತ. ಅದನ್ನು ಸರಿಯಾಗಿ ಬಳಸಿಕೊಳ್ಳುವತ್ತ ನಮ್ಮ ವ್ಯವಸ್ಥೆ ಬದಲಾಗಬೇಕು. ಆ ಮೂಲಕ ಮಕ್ಕಳಲ್ಲಿ ದೇಶ ಭಕ್ತಿಯ ಬೀಜವನ್ನು ಬಿತ್ತಬೇಕು. ವ್ಯವಸ್ಥೆಗಳು ಸರಿಯಾಗದಿದ್ದಾಗ ದೇಶ ದೇಶಗಳ ನಡುವಿನ ಸಂಬಂಧ ಮುರಿದು ಬಿದ್ದು ಯುದ್ಧಕ್ಕೆ ಕಾರಣವಾಗುತ್ತದೆ. ನಮಗೆ ಯುದ್ಧ ಬೇಡ ಶಾಂತಿ ಬೇಕು ಇದನ್ನರಿತು ನಾವು ಇಂದು ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿಯವರು ಹಾಕಿ ಕೊಟ್ಟ ತತ್ವ, ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದೇ ನಾವು ಆ ಮಹಾನ್ ಚೇತನರಿಗೆ ಸಲ್ಲಿಸುವ ದೊಡ್ಡ ಗೌರವವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹೆಚ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತ ಸೂರಜ್., ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಪ್ರೇಮಲತ ದಿನದ ಪ್ರಾಮುಖ್ಯತೆಯನ್ನು ವಾಚಿಸಿದರು. ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.