ಮಹಿಳಾ ಮೀಸಲಾತಿ ಮರು ಸ್ಥಾಪಿಸಿ: ನೌರೀನ್ ಆಲಂಪಾಡಿ ಒತ್ತಾಯ
ಮಂಗಳೂರು: ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಹಿಳಾ ಮೀಸಲಾತಿಯನ್ನು ಮರು ಸ್ಥಾಪಿಸಬೇಕು. ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕಾಗಿರುವ ಹಿಜಾಬ್ ಮರಳಿ ನೀಡಿ ಅವರ ಶೈಕ್ಷಣಿಕ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂದು ವಿಮೆನ್ ಇಂಡಿಯಾ ಮೂವ್ ಮೆಂಟ್ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ನೌರೀನ್ ಆಲಂಪಾಡಿ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮೆನ್ ಇಂಡಿಯಾ ಮೂವ್ ಮೆಂಟ್ ನ ರಾಷ್ಟ್ರೀಯ ಸಮಿತಿಯು, ಮಹಿಳಾ ಸುರಕ್ಷತೆ, ಸಾಮೂಹಿಕ ಜವಾಬ್ದಾರಿ ಎಂಬ ಘೋಷವಾಕ್ಯದಡಿ ದೇಶಾದ್ಯಂತ ಅಕ್ಟೋಬರ್ 2 ರಿಂದ ಡಿಸೆಂಬರ್ 2ರವರೆಗೆ ರಾಷ್ಟ್ರೀಯ ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದ ಮೂಲಕ ಸಮಿತಿಯು ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ ಎಂದರು.
ಸಮಿತಿ ರಾಷ್ಟ್ರಾಧ್ಯಕ್ಷೆ ಯಾಸ್ಮಿನ್ ಇಸ್ಲಾಂ ನೇತೃತ್ವದಲ್ಲಿ ಅಕ್ಟೋಬರ್ 2ರಂದು ರಾಷ್ಟ್ರ ಮಟ್ಟದ ಮತ್ತು ಅಕ್ಟೋಬರ್ ೩ರಂದು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮ ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ವಿಷಯಕ್ಕೆ ಸಂಬಂಧಿಸಿದ ಪೋಸ್ಟರ್ ಹಾಗೂ ವೀಡಿಯೋ ಬಿಡುಗಡೆ, ಕರಪತ್ರಗಳ ವಿತರಣೆ ಮೂಲಕ ಅಭಿಯಾನ ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಅನ್ಯಾಯಕ್ಕೆ ಒಳಗಾಗುತ್ತಿರುವ ಮಹಿಳೆಗೆ ತ್ವರಿತ ನ್ಯಾಯ, ಸುರಕ್ಷತೆಯನ್ನು ಒದಗಿಸುವಲ್ಲಿ ಸಾಮಾಜದ ಜವಾಬ್ದಾರಿಯನ್ನು ತಿಳಿಯಪಡಿಸುವುದೇ ಅಭಿಯಾನದ ಬಹುಮುಖ್ಯ ಉದ್ದೇಶ ಎಂದು ಹೇಳಿದರು.
ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರು, ಪುತ್ತೂರು ತಾಲೂಕು ಅಧ್ಯಕ್ಷೆ ಝಾಹಿದಾ ಪುತ್ತೂರು, ಮಂಗಳೂರು ತಾಲೂಕು ಅಧ್ಯಕ್ಷೆ ರೇಷ್ಮಾ, ಬಂಟ್ವಾಳ ತಾಲೂಕು ಕಾರ್ಯದರ್ಶಿ ಶಮೀಮಾ ಉಪಸ್ಥಿತರಿದ್ದರು.