
ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಮೃತದೇಹ ಪತ್ತೆ
ಮಂಗಳೂರು: ಎಂಆರ್‌ಪಿಎಲ್ ಅರೋಮೆಟಿಕ್ ಕಾಂಪ್ಲೆಕ್ಸ್‌ನಲ್ಲಿ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದು, ಅವರ ಮೃತದೇಹ ಶನಿವಾರ ಪತ್ತೆಯಾಗಿದೆ.
ಅಸ್ಸಾಂನ ಸಮಾನ್ ಅಲಿ (24) ಮೃತಪಟ್ಟವರು. ಸೆಕ್ಯುರಿಟಿ ಮ್ಯಾನೇಜರ್ ಅನಿಲ್ ಕುಮಾರ್ ಅವರು ಕಂಪೆನಿಯ ಸುತ್ತಮುತ್ತಲಿನ ಪಾಯಿಂಟ್‌ಗಳಿಗೆ ಅ.17ರಂದು ರಾತ್ರಿ ಪಾಳಿ ಕರ್ತವ್ಯಕ್ಕೆ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಕಮಾಡಿದ್ದರು. ಅ.18ರಂದು ಬೆಳಗ್ಗಿನ ಜಾವ 5 ಗಂಟೆಗೆ ಕಂಪನಿಯ ಸೈಟ್ ಸೆಕ್ಯೂರಿಟಿ ಇನ್ ಚಾರ್ಜ್ ವಿಶ್ವನಾಥ ಅವರು ಕರೆ ಮಾಡಿ ನಾಲಾಗೇಟ್ ಬಳಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಸಮಾನ್ ಆಲಿ ಕರ್ತವ್ಯದ ಸ್ಥಳದಿಂದ ಕಾಣೆಯಾಗಿರುವ ವಿಷಯ ತಿಳಿಸಿದ್ದರು. ಕಂಪೆನಿಯ ರಕ್ಷಣಾ ತಂಡದವರು ಸುತ್ತಮುತ್ತ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ. ಶನಿವಾರ ಬೆಳಗ್ಗೆ ಅವರ ಮೃತದೇಹ ಕಂಪೆನಿಯ ಆವರಣದಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆ ಶಂಕೆ:
ಸಮಾನ್ ಆಲಿ ಅವರು ವಿಸಿಲ್ (ಸೀಟಿ)ಗೆ ಬಳಸುವ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.