
ಮದುವೆ ನಿಶ್ಚಯವಾಗಿದ್ದ ಯುವತಿ ಅಪಾಘಾತಕ್ಕೆ ಬಲಿ
ಮಂಗಳೂರು: ನಂತೂರು ಹೆದ್ದಾರಿಯಲ್ಲಿ ಕಂಟೇನರ್ ಲಾರಿ ಢಿಕ್ಕಿಯಾಗಿ ಮೃತಪಟ್ಟ ಕೋಡಿಕಲ್ ನಿವಾಸಿ ಕ್ರಿಸ್ತಿ ಕ್ರಾಸ್ತಾ (27) ಅವರು ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸ್ಪೀಚ್ ಅಂಡ್ ಹಿಯರಿಂಗ್ ವಿಭಾಗದಲ್ಲಿ ವೈದ್ಯೆಯಾಗಿದ್ದು, ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿತ್ತು.
ಕ್ರಿಸ್ತಿ ಕ್ರಾಸ್ತಾಗೆ ದೇರೆಬೈಲಿನ ಯುವಕನ ಜೊತೆಗೆ ಮದುವೆ ನಿಶ್ಚಯವಾಗಿತ್ತು. ನ.23ರಂದು ಮಂಗಳೂರಿನ ಚರ್ಚ್ ಹಾಲ್ ಒಂದರಲ್ಲಿ ಮದುವೆಗೆ ದಿನ ನಿಗದಿಪಡಿಸಿ ಆಮಂತ್ರಣ ಪತ್ರಿಕೆಯನ್ನೂ ಹಂಚಲಾಗಿತ್ತು. ಈ ನಡುವೆ, ಕ್ರಿಶ್ಚಿಯನ್ನರ ಚರ್ಚ್ ಪದ್ಧತಿಯಂತೆ ಮದುವೆಗೂ ಮುನ್ನ ಯುವಕ-ಯುವತಿಗೆ ಆಯಾ ಚರ್ಚ್‌ಗಳಲ್ಲಿ ಮದುವೆ ಕುರಿತಾಗಿ ತರಬೇತಿ ಇರುತ್ತದೆ. ಇದಕ್ಕಾಗಿ ಕ್ರಿಸ್ತಿ ಕ್ರಾಸ್ತಾ ಅವರು ಭಾನುವಾರ ಸಂಜೆ ನಂತೂರಿನ ಶಾಂತಿ ಕಿರಣ ಸಭಾಂಗಣದಲ್ಲಿ ತರಬೇತಿಗೆ ಹಾಜರಾಗಿದ್ದರು.
ಚರ್ಚ್ ಪದ್ಧತಿಯಂತೆ ಮೂರು ಭಾನುವಾರಗಳ ಮದುವೆ ಘೋಷಣೆಯೂ ಇಂದಿಗೆ ಮುಗಿದಿತ್ತು. ಹೀಗಾಗಿ ಮದುವೆ ಚರ್ಚ್ ಪ್ರಕಾರ ಅಧಿಕೃತವಾಗಿತ್ತು. ಇದಲ್ಲದೆ, ಮದುವೆ ಕುರಿತ ತರಬೇತಿಯನ್ನೂ ಮುಗಿಸಿ ಸಂಜೆ ವೇಳೆಗೆ ಶಾಂತಿ ಕಿರಣ ಸಭಾಂಗಣದಿಂದ ಮನೆ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ನಂತೂರು ಕಡೆಯಿಂದ ಬಂದಿದ್ದ ಕಂಟೇನರ್ ಲಾರಿ ನೇರವಾಗಿ ಡಿಕ್ಕಿಯಾಗಿದ್ದು ಹಿಂಭಾಗದ ಚಕ್ರಕ್ಕೆ ಸಿಲುಕಿದ್ದ ಯುವತಿ ಸ್ಥಳದಲ್ಲೇ ದುರಂತ ಸಾವನ್ನಪ್ಪಿದ್ದಾರೆ. ಲಾರಿ ಚಾಲಕನ ಧಾವಂತ, ನಿರ್ಲಕ್ಷ್ಯದ ಚಾಲನೆ ಬಾಳಿ ಬದುಕಬೇಕಿದ್ದ ಯುವತಿಯ ಜೀವ ಕಿತ್ತುಕೊಂಡಿದೆ. ಇತ್ತ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಮನೆಯವರಿಗೆ ಏಕೈಕ ಪುತ್ರಿಯ ಸಾವು ಶೋಕ ಸಾಗರದಲ್ಲಿ ಮುಳುಗಿಸಿದೆ. ಮದುವೆ ಸಡಗರದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.