
ಪುತ್ತಿಲಪರಿವಾರ-ಸಂಘಪರಿವಾರ ‘ಜಟಾಪಟಿ’: ವಿಎಚ್‌ಪಿ ಭೂಮಿಪೂಜಾ ತಾಣ ‘ರಣರಂಗ’
ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಹುಟ್ಟಿಕೊಂಡ ಪುತ್ತಿಲಪರಿವಾರ ಮತ್ತು ಪುತ್ತೂರು ಸಂಘಪರಿವಾರದ ನಡುವಿನ ವೈಮನಸ್ಸು ಇನ್ನೂ ಬೂದಿಮುಚ್ಚಿದ ಕೆಂಡದಂತೆ ಹಾಗೆಯೇ ಉಳಿದುಕೊಂಡಿದೆ ಎನ್ನುವುದಕ್ಕೆ ಬುಧವಾರ ನಡೆದ ಪುತ್ತೂರು ವಿಶ್ವ ಹಿಂದೂ ಪರಿಷತ್ ನೂತನ ಕಾರ್ಯಾಲಯದ ‘ಭೂಮಿಪೂಜೆ’ ಕಾರ್ಯಕ್ರಮ ಪ್ರತ್ಯಕ್ಷ ಸಾಕ್ಷಿಯಾಯಿತು. ಪುತ್ತೂರು ಪಂಚವಟಿಯ ಪಕ್ಕದಲ್ಲಿ ನಡೆದ ಈ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಹಾಗೂ ಸಂಘಪರಿವಾರದ ಕಾರ್ಯಕರ್ತರ ನಡುವೆ ಮಾತಿನಚಕಮುಕಿ, ಹ್ಯೊಕೈ, ಪರಸ್ಪರ ತಳ್ಳಾಟ ‘ರಣರಂಗ’ವನ್ನು ಸೃಷ್ಟಿಸಿತು.
ಪ್ರಾರಂಭದಲ್ಲಿ ಭೂಮಿಪೂಜಾ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ತಂಡವನ್ನು ಸಂಘಪರಿವಾರದ ಕಾರ್ಯಕರ್ತರ ತಂಡವೊಂದು ವಿರೋಧಿಸಿತು. ‘ನೀವ್ಯಾಕೆ ಬಂದದ್ದು’ ‘ನಿಮ್ಮನ್ಯಾರು ಕರೆದದ್ದು’ ಎಂಬ ಪ್ರಶ್ನೆಯೊಂದಿಗೆ ಕಾರ್ಯಕ್ರಮಕ್ಕೆ ಪುತ್ತಿಲ ತಂಡ ಬರದಂತೆ ತಡೆಯುವ ಕೆಲಸಕ್ಕೆ ಮುಂದಾಯಿತು. ಈ ಹಂತದಲ್ಲಿ ಪರಸ್ಪರ ಮಾತಿನ ಚಕಮುಕಿ ನಡೆಯಿತು. ಪರಸ್ಪರ ತಳ್ಳಾಟವೂ ನಡೆಯಿತು.
ಆಗ ರಂಗಪ್ರವೇಶಿಸಿದ ಹಿರಿಯರಿಂದಾಗಿ ಸಮಸ್ಯೆ ತಣ್ಣಗಾಯಿತು.
ಆದರೆ ಕಾರ್ಯಕ್ರಮದ ಮಧ್ಯಭಾಗದಲ್ಲಿ ಅರುಣ್‌ಕುಮಾರ್ ಪುತ್ತಿಲ ಹಾಗೂ ತಂಡ ಎದ್ದು ಹೊರಟಾಗ ಮತ್ತೆ ರಣರಂಗ ಸೃಷ್ಟಿಯಾಯಿತು. ಪುತ್ತಿಲಪರಿವಾಋ ಮತ್ತು ಸಂಘಪರಿವಾರದ ಕಾರ್ಯಕರ್ತರ ನಡುವೆ ಹ್ಯೊಕೈ ನಡೆಯಿತು. ಅವ್ಯಾಚ್ಛ ಶಬ್ದಗಳ ಬಳಕೆಯೊಂದಿಗೆ ಪರಸ್ಪರ ಹೊಡೆದಾಟವೂ ನಡೆಯಿತು. ಬಳಿಕ ಪೊಲೀಸ್ ರಂಗಪ್ರವೇಶ ಮಾಡಿದ ಪರಿಣಾಮ ಪರಿಸ್ಥಿತಿ ಹತೋಟಿಗೆ ಬಂತು.
ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಅವರು ಸ್ಪರ್ಧಿಸಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾದ ಪುತ್ತಿಲಪರಿವಾರದ ವಿರುದ್ಧ ಸಂಘಪರಿವಾರದ ಕಾರ್ಯಕರ್ತರ ಕೋಪ ತಣ್ಣಗಾಗಿಲ್ಲ. ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಯಾದರೂ ವಸ್ತುಸ್ಥಿತಿ ಬದಲಾಗಿಲ್ಲ. ಈ ನಡುವೆ ಪುತ್ತಿಲ ವಿಶ್ವಹಿಂದೂ ಪರಿಷತ್ ಮುಖಂಡರ ಬಗ್ಗೆ ಚುನಾವಣೆಯ ಸಂದರ್ಭ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡಿದ್ದಾರೆ ಎನ್ನುವ ಸುದ್ದಿಯೊಂದನ್ನೂ ಹರಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅವರನ್ನು ತಡೆಯಲು ಮುಖಂಡರ ಬಗ್ಗೆ ಪುತ್ತಿಲ ಆಡಿರುವ ಮಾತುಗಳೇ ಕಾರಣ ಎನ್ನಲಾಗುತ್ತಿದೆ. ಆದರೆ ಈ ಕಾರ್ಯಕ್ರಮಕ್ಕೆ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹಿರಿಯ ವಿಎಚ್‌ಪಿ ಮುಖಂಡರಾದ ಯು.ಪೂವಪ್ಪ ಅವರೇ ಅರುಣ್ ಪುತ್ತಿಲ ಅವರಿಗೆ ಆಹ್ವಾನ ನೀಡಿದ್ದಾರೆ. ಅಷ್ಟೇ ಅಲ್ಲ ಪುತ್ತಿಲ ಪರಿವಾರವನ್ನು ಬರದಂತೆ ತಡೆದ ವಿಚಾರದ ಬಗ್ಗೆ ತಮ್ಮ ಪ್ರಾಸ್ತಾವಿಕ ಮಾತುಗಳ ಸಂದರ್ಭ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಅಶೋಕ್ ರೈ ಶಕುಂತಳಾ ಶೆಟ್ಟಿ ಒಕೆ..
ವಿಶ್ವಹಿಂದೂ ಪರಿಷತ್ ನೂತನ ಕಾರ್ಯಾಲಯದ ಭೂಮಿಪೂಜೆ ಕಾರ್ಯಕ್ರಮಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಆಗಮಿಸಿ ಅಚ್ಚರಿ ಮೂಡಿಸಿದರು. ಸ್ವಲ್ಪ ಹೊತ್ತಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರೂ ಕಾರ್ಯಕ್ರಮಕ್ಕೆ ಆಗಮಿಸಿದರು. ಇವರಿಬ್ಬರನ್ನೂ ವೇದಿಕೆಗೆ ಕರೆದು ಗೌರವ ನೀಡಲಾಯಿತು. ಆದರೆ ಇದಕ್ಕೆ ಯಾರ ತಕರಾರು ಕಂಡುಬರಲಿಲ್ಲ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ, ಆಯೋಧ್ಯಾ ರಾಮಮಂದಿರ ನಿರ್ಮಾಣದ ಉಸ್ತುವಾರಿಯಾಗಿದ್ದ ಗೋಪಾಲ್‌ಜಿ ಅವರು ನಮಗೆ ಕಾಂಗ್ರೇಸ್ ಬಗ್ಗೆ ಯಾವ ವಿರೋಧವೂ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಪುತ್ತಿಲ ಪರಿವಾರ ಮತ್ತು ಸಂಘಪರಿವಾರದ ಕಾರ್ಯಕರ್ತರ ನಡುವೆ ನಡೆದ ಈ ಗಲಭೆ ಮುಂದೆಯೂ ನಾವು ಒಂದಾಗೋದಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿತು. ಅರುಣ್ ಪುತ್ತಿಲ ಹಾಗೂ ಅವರ ತಂಡ ಬಿಜೆಪಿ ಸೇರ್ಪಡೆಯೊಂದಿಗೆ ಸ್ವಲ್ಪಮಟ್ಟಿಗೆ ಸೈಲೆಂಟ್ ಆಗಿದ್ದ ಪುತ್ತಿಲ ಪರಿವಾರದ ಚಟುವಟಿಕೆ ಮತ್ತೆ ಗರಿಗೆದರುವ ಸಾಧ್ಯತೆಯನ್ನು ಇಂದಿನ ಪ್ರಕರಣ ಹುಟ್ಟುಹಾಕಿದೆ.