ಉಪ್ಪಿನಂಗಡಿ ಸಂಗಮ ತಾಣದಲ್ಲಿ ‘ಪಿಂಡಪ್ರಧಾನ’ಕ್ಕೆ ಜನಸಾಗರ
ಪುತ್ತೂರು: ಉಪ್ಪಿನಂಗಡಿ ಸಹಸ್ತ್ರಲಿಂಗೇಶ್ವರ ತಾಣವೆಂದರೆ ಅದು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ. ಅದರಲ್ಲೂ ಇಲ್ಲಿ ಪಿತೃಗಳಿಗೆ ಅಪರಕ್ರಿಯೆ ಮಾಡಿದರೆ ಮೋಕ್ಷ ಲಭಿಸುತ್ತದೆ ಎಂಬ ನಂಬಿಕೆ ಸಾಂಪ್ರದಾಯಿಕವಾಗಿಯೇ ಜನರ ಮನದಲ್ಲಿ ನೆಲೆ ನಿಂತಿದೆ. ಈ ಹಿನ್ನಲೆಯಲ್ಲಿಯೇ ಮಹಾಲಯ ಅಮಾವಾಸ್ಯೆಯಾದ ಬುಧವಾರ ಉಪ್ಪಿನಂಗಡಿ ದೇವಳದಲ್ಲಿ ಪಿಂಡ ಪ್ರಧಾನಕ್ರಿಯೆಗಾಗಿ ಭಕ್ತ ಜನರ ಸಾಗರವೇ ತುಂಬಿತ್ತು. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ-ಕುಮಾಧಾರಾ ಸಂಗಮ ತಾಣದಲ್ಲಿ ಪಿಂಡ ಪ್ರಧಾನ ಕ್ರಿಯೆಗೆ ಭಾರೀ ಮಹತ್ವ ಇದೆ.
ಮಹಾಲಯ ಅಮವಾಸ್ಯೆಯ ದಿನ ತಮ್ಮ ಪಿತೃಗಳಿಗೆ ಪಿಂಡ ಪ್ರಧಾನ ಮಾಡಿದಲ್ಲಿ ಪಿತೃಗಳಿಗೆ ದೇವರು ಮೋಕ್ಷ ದಯಪಾಲಿಸುತ್ತಾನೆ ಎನ್ನುವುದು ಹಿಂದಿನಿಂದಲೂ ಬಂದಿರುವ ನಂಬಿಕೆ. ಕ್ಷೇತ್ರದಲ್ಲಿ ಇಂದು ಸಾವಿರಕ್ಕೂ ಮಿಕ್ಕಿದ ಪಿಂಡ ಪ್ರಧಾನ ನಡೆದಿದ್ದು, ಭಕ್ತರಿಗೆ ಪಿಂಡ ಪ್ರಧಾನಕ್ಕೆ ಕ್ಷೇತ್ರದ ವತಿಯಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕ ಪಿಂಡ ಪ್ರಧಾನಕ್ಕೆ 600 ರೂ. ಮತ್ತು ಪ್ರತ್ಯೇಕ ಪಿಂಡ ಪ್ರಧಾನಕ್ಕೆ 1500 ಸಾವಿರ ರೂಪಾಯಿಗಳನ್ನು ಕ್ಷೇತ್ರದ ವತಿಯಿಂದ ನಿಗದಿಪಡಿಸಲಾಗಿದೆ. ತಿಲ ಹೋಮ ನಡೆಸುವವರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಕ್ಷೇತ್ರದ ವತಿಯಿಂದ ಮಾಡಲಾಗಿದೆ.
ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಜನ ಇಲ್ಲಿ ಬಂದು ತಮ್ಮ ಪಿತೃಗಳಿಗೆ ಪಿಂಡ ಪ್ರಧಾನ ಮಾಡುತ್ತಾರೆ. ಅಲ್ಲದೆ ಬೇರೆ ಊರಿನಲ್ಲಿ ನೆಲೆಸಿರುವ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಪಟ್ಟ ಜನರೂ, ತಮ್ಮ ಎಲ್ಲಾ ಕೆಲಸಗಳನ್ನು ಬಿದಿಗಿಟ್ಟು, ಕ್ಷೇತ್ರಕ್ಕೆ ಬಂದು ಪಿಂಡ ಪ್ರಧಾನ ನೆರವೇರಿಸುತ್ತಾರೆ. ಪಿಂಡ ಪ್ರಧಾನ ಪ್ರಕ್ರಿಯೆಗಾಗಿ ಕ್ಷೇತ್ರದಲ್ಲಿ ಹೆಚ್ಚುವರಿ ಅರ್ಚಕರನ್ನೂ ನೇಮಿಸಲಾಗುತ್ತದೆ. ಅಪರ ಕ್ರಿಯೆಯ ಪ್ರಕ್ರಿಯೆಗಳು ಮುಗಿದ ಬಳಿಕ ಭಕ್ತರು ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಸಂಗಮ ಸ್ಥಾನದಲ್ಲಿ ಪಿಂಡವನ್ನು ನೀರಿನಲ್ಲಿ ಬಿಡುತ್ತಾರೆ. ನದಿಯಲ್ಲಿ ಮುಳುಗಿ ಸ್ನಾನ ಮಾಡಿದ ಬಳಿಕ ದೇವರ ದರ್ಶನ ಪಡೆದು ಹಿಂದಿರುಗುತ್ತಾರೆ.
ಕರಾವಳಿ ಭಾಗದಲ್ಲಿ ತರವಾಡು ಮನೆಗಳಲ್ಲಿ ಪಿತೃಗಳಿಗೆ ಬಡಿಸುವ ವ್ಯವಸ್ಥೆಯೂ ಇದ್ದು, ಅಲ್ಲಿಯೂ ಇದೇ ರೀತಿಯ ಪ್ರಕ್ರಿಯೆಗಳು ನಡೆಯುತ್ತದೆ. ತರವಾಡು ಮನೆಗಳಲ್ಲಿ ಬಡಿಸಲು ಅಸಾಧ್ಯವಾದ ಜನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಈ ಪ್ರಕ್ರಿಯೆಯನ್ನು ಮುಗಿಸುತ್ತಾರೆ.