
ಉಡುಪಿಯ 2 ಗ್ರಾ.ಪಂ.ಗಳಲ್ಲಿ ಮತದಾನ ಬಹಿಷ್ಕಾರ
ಉಡುಪಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಬೈಂದೂರು ತಾಲೂಕಿನ ಜಡ್ಕಲ್ ಮತ್ತು ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ಸದಸ್ಯರು ಸೋಮವಾರ ನಡೆದ ವಿಧಾನ ಪರಿಷತ್ ಉಪಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿದರು.
ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಕೆಲವು ಗ್ರಾ.ಪಂ. ಸದಸ್ಯರು ಕೂಡಾ ಮತದಾನದಿಂದ ದೂರವುಳಿದ ಬಗ್ಗೆ ವದರಿ ಬಂದಿದೆ.
ಕಸ್ತೂರಿ ರಂಗನ್ ವರದಿಯಲ್ಲಿ ತಮ್ಮ ಗ್ರಾಮಗಳನ್ನು ಸೇರಿಸಿರುವುದನ್ನು ವಿರೋಧಿಸಿ ಚುನಾವಣೆ ಬಹಿಷ್ಕರಿಸಿದ್ದ ಜಡ್ಕಲ್ ಗ್ರಾ.ಪಂ.ನಲ್ಲಿ 18 ಸದಸ್ಯೆಯರಿದ್ದು, ಅಧ್ಯಕ್ಷೆ ಪಾರ್ವತಿ ಸೇರಿದಂತೆ ಯಾವೊಬ್ಬ ಸದಸ್ಯರೂ ಮತಗಟ್ಟೆಯ ಹತ್ತಿರ ಸುಳಿದಿಲ್ಲ.
ಕೆರಾಡಿ ಗ್ರಾ.ಪಂ.ನಲ್ಲಿ 16 ಮಂದಿ ಸದಸ್ಯರಿದ್ದು, ಯಾರೂ ಮತ ಚಲಾಯಿಸಿಲ್ಲ.
ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಸೇರಿದಂತೆ ಮೂವರು ಭದ್ರತಾ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದು, ಮತದಾರರಿಗಾಗಿ ಕಾಯುತ್ತಿದ್ದರು.
ರವಿವಾರ ಎಡಿಸಿ ಮಮತಾದೇವಿ ಮತ್ತು ಕುಂದಾಪುರ ಎ.ಸಿ. ಮಹೇಶ್ಚಂದ್ರ ಅವರು ಜಡ್ಕಲ್ ಮತ್ತು ಕೆರಾಡಿ ಗ್ರಾ.ಪಂ.ಗಳಿಗೆ ಆಗಮಿಸಿ ಸದಸ್ಯರ ಮನವೊಲಿಕೆಗೆ ಪ್ರಯತ್ನ ಮಾಡಿದ್ದರು. ಆದರೆ, ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯಿಂದ ನಮ್ಮ ಗ್ರಾಮಗಳನ್ನು ಕೈಬಿಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಹಾಗಾಗಿ ಮತದಾನ ಮಾಡಿಲ್ಲ ಎಂದು ಆಯಾ ಗ್ರಾ.ಪಂ. ಸದಸ್ಯರು ತಿಳಿಸಿದರು.