
ಮಹಿಳಾ ಭಜನಾರ್ಥಿಗಳ ವಿರುದ್ಧ ಅವಹೇಳನ ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘದ ಖಂಡನೆ
ಉಜಿರೆ: ಮಹಿಳಾ ಭಜನಾರ್ಥಿಗಳ ವಿರುದ್ಧ ಅವಹೇಳನಾಕಾರಿ ಹೇಳಿಕೆಯನ್ನು ದ.ಕ. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘವು ತೀವ್ರವಾಗಿ ಖಂಡಿಸುತ್ತದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ನವರಾತ್ರಿ, ಬ್ರಹ್ಮ ಕಲಶೋತ್ಸವ, ಸಾರ್ವಜನಿಕ ಶ್ರೀ ಗಣೇಶೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಪ್ರ ಸಮಾಜದ ಮಾತ್ರವಲ್ಲದೇ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಬಿಲ್ಲವರೂ ಸೇರಿದಂತೆ ಸಮಗ್ರ ಹಿಂದೂ ಸಮಾಜದ ಅನೇಕ ಹೆಣ್ಣು ಮಕ್ಕಳು ಕುಣಿತ ಭಜನೆ ತರಬೇತಿ ಪಡೆದು ಕುಣಿತ ಭಜನಾ ಸೇವೆಯಲ್ಲಿ ಭಾಗವಹಿಸಿರುತ್ತಾರೆ.
ದುರುದ್ದೇಶದಿಂದ ಅಥವಾ ಅಸಂಬದ್ಧ ಹೇಳಿಕೆಗಳಿಂದ ಪ್ರಚಾರ ಪಡೆಯುವ ಉದ್ದೇಶದಿಂದ ಅಥವಾ ಹಿಂದೂ ಧಾರ್ಮಿಕ ಶ್ರದ್ಧಾ ಕಾರ್ಯದಿಂದ ಯುವ ಸಮೂಹವನ್ನು ವಿಮುಖರನ್ನಾಗಿ ಮಾಡಬೇಕೆಂಬ ದುರಾಲೋಚನೆಯಿಂದ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಮಾಡಿರುವ ಆಪಾದನೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂಥ ಕಾರ್ಯ. ಇದರಿಂದ ನಮ್ಮ ಬ್ರಾಹ್ಮಣ ಸಮುದಾಯ ಮಾತ್ರವಲ್ಲದೇ ಎಲ್ಲಾ ಹಿಂದೂ ಬಾಂಧವರಿಗೆ ನೋವಾಗಿರುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಪ್ರತಿಭಾ ಕುಳಾಯಿ ಅವರು ಭಜನೆಯಲ್ಲಿ ಮಹಿಳೆಯರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿ ಸ್ವಾವಲಂಬಿ ಪ್ರಗತಿಪರ ಮಹಿಳಾ ವೃಂದಕ್ಕೆ ನೋವನ್ನುಂಟುಮಾಡಿದ್ದಾರೆ.
ಹಿಂದಿನ ಕಾಲದಲ್ಲಿ ರಾಜಕೀಯ ರಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ವಿರಳವಾಗಿತ್ತು. ಅಲ್ಲದೇ ಕೆಲವರು ಕುಕೃತ್ಯಗಳನ್ನು ಮಾಡಿದವರೂ ಇರಬಹುದು. ಹಾಗೆಂದು ರಾಜಕೀಯಕ್ಕೆ ಮಹಿಳೆ ಬರಬಾರದೆಂದು ಹೇಳಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಅವರ ಹೇಳಿಕೆ ಅಸಂಬದ್ಧವಾಗಿದೆ. ಇದನ್ನು ಸಮಗ್ರ ಶಿವಳ್ಳಿ ವಿಪ್ರ ಬಾಂಧವರು ಖಂಡಿಸುತ್ತಾರೆ ಎಂದು ದ.ಕ. ಜಿಲ್ಲಾ ಶಿವಳ್ಳಿ ಬ್ರಾಹ್ಮಣರ ಸಂಘ ಖಂಡಿಸಿ ಹೇಳಿಕೆ ನೀಡಿದೆ.