
ಬಂಟ್ವಾಳ ನಿವಾಸಿ ಹಾಸನದಲ್ಲಿ ಶಂಕಾಸ್ಪದ ಸಾವು: ತನಿಖೆಗೆ ಕುಟುಂಬಸ್ಥರ ಆಗ್ರಹ
ಬಂಟ್ವಾಳ: ಕೊಯಿಲ ಗ್ರಾಮದ ಪರಾರಿ ನಿವಾಸಿ, ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದತ್ತರಾಜ್ ಶೆಟ್ಟಿಗಾರ್ (54) ಇವರ ಮೃತದೇಹ ಶಂಕಾಸ್ಪದ ರೀತಿಯಲ್ಲಿ ಹಾಸನದಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.
ಮೃತರು ತಂದೆ, ತಾಯಿ, ಪತ್ನಿ, ಪುತ್ರಿ, ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಮೃತರು ಜಿಲ್ಲಾ ಪದ್ಮಶಾಲಿ ಸಮಾಜ ಸೇವಾ ಸಂಘದ ಕ್ರೀಡಾ ಸಂಚಾಲಕರಾಗಿದ್ದರು.
ಕುಶಾಲನಗರ ಸಮೀಪದ ಚಿಕ್ಕಹೊಸೂರು ತನ್ವಿ ಸಿಮೆಂಟ್ ಪ್ರಾಡಕ್ಸ್ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ಮೆನೇಜರ್ ಆಗಿ ಗುರುತಿಸಿಕೊಂಡಿದ್ದ ಇವರು ಬುಧವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಅವರು ವಾಸವಾಗಿದ್ದ ಮನೆಯಿಂದ ನಾಪತ್ತೆಯಾಗಿದ್ದರು. ಇದೇ ವೇಳೆ ಅವರು ‘ನನ್ನ ಎಲ್ಲಾ ಪ್ರೀತಿಯ ಗ್ರಾಹಕರೇ, ನಮ್ಮಲ್ಲಿ ಸಾಮಾಗ್ರಿಗಳನ್ನು ಖರೀದಿಸಿ ಪೇಮೆಂಟ್ ಮಾಡದೆ ನನಗೆ ಸಹಕರಿಸಿದ ಎಲ್ಲಾ ಮಹಾನ್ ಗುತ್ತಿಗೆದಾರರಿಗೆ ನನ್ನ ನಮಸ್ಕಾರಗಳು’ ಎಂದು ತನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿದ ಬಳಿಕ ಸ್ವಿಚ್ ಆಫ್ ಮಾಡಿಕೊಂಡಿದ್ದರೆನ್ನಲಾಗಿದೆ.
ಈ ಬಗ್ಗೆ ಇವರ ಮನೆಯವರು ವಿಷಯ ತಿಳಿದು ಬಂಟ್ವಾಳ ಗ್ರಾಮಾಂತರ ಠಾಣೆ ಮತ್ತು ಬೈಲಕೊಪ್ಪ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರಿಂದಾಗಿ ಅಲ್ಲಿನ ಪೊಲೀಸರು ಹುಡುಕಾಟ ನಡೆಸಿ ಗುರುವಾರ ಸಂಜೆ ಹಾಸನ ಜಿಲ್ಲೆಯ ಕೋಣನೂರು ಎಂಬಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಮೃತರ ಪತ್ನಿ ಸಹಿತ ಸಹೋದರರು ಅಲ್ಲಿಗೆ ತೆರಳಿ, ಶುಕ್ರವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹ ಹುಟ್ಟೂರಾದ ಕೊಯಿಲ ಮನೆಗೆ ತರಲಾಗಿದೆ. ಈ ಬಗ್ಗೆ ಬೈಲುಕೊಪ್ಪ ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ಆಗ್ರಹ:
ದತ್ತರಾಜ್ ಶೆಟ್ಟಿಗಾರ್ ದುಡಿಯುತ್ತಿದ್ದ ಸಂಸ್ಥೆಯಲ್ಲಿ ಗುತ್ತಿಗೆದಾರರು ಲಕ್ಷಾಂತರ ಮೊತ್ತದ ಬಿಲ್ಲು ಪಾವತಿಸದೆ ಬಾಕಿ ಇರಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇವರ ಸಾವಿನ ಬಗ್ಗೆ ಹಲವು ರೀತಿಯ ಸಂಶಯಗಳಿಗೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತರ ತಂದೆ ನೋಣಯ ಶೆಟ್ಟಿಗಾರ್ ಕೊಯಿಲ ಆಗ್ರಹಿಸಿದ್ದಾರೆ.