ಬ್ರಹ್ಮಾವರ ತಾಲೂಕು ಆಡಳಿತ ಸೌಧದ ಅವ್ಯವಸ್ಥೆ: ನೊಂದ ನಾಗರಿಕರಿಂದ ಪ್ರತಿಭಟನೆಯ ಎಚ್ಚರಿಕೆ

ಬ್ರಹ್ಮಾವರ ತಾಲೂಕು ಆಡಳಿತ ಸೌಧದ ಅವ್ಯವಸ್ಥೆ: ನೊಂದ ನಾಗರಿಕರಿಂದ ಪ್ರತಿಭಟನೆಯ ಎಚ್ಚರಿಕೆ


ಕುಂದಾಪುರ: ಉಡುಪಿಯಿಂದ ಬೇರ್ಪಟ್ಟು ಬ್ರಹ್ಮಾವರ ಸ್ವತಂತ್ರ ತಾಲೂಕು ಆದಮೇಲೆ ನಗರದ ಬೆಳವಣಿಗೆ ವೇಗ ಪಡೆದಿದೆ. ತಾಲೂಕು ಕೇಂದ್ರವಾಗಿ ಗುರುತಿಸಿಕೊಂಡ ಇಲ್ಲಿ ಎಲ್ಲಾ ತಾಲೂಕು ಆಡಳಿತದ ಕೇಂದ್ರಗಳೂ ಆರಂಭಗೊಂಡಿವೆ. ಸರ್ಕಾರವೂ ಗಮನ ಹರಿಸಿ ಆಡಳಿತದ ಅನುಕೂಲಕ್ಕಾಗಿ ಬಹು ಮಹಡಿಯ ಮಿನಿ ವಿಧಾನ ಸೌಧ ಎಂದೇ ಗುರುತಿಸಲಾಗುವ ತಾಲೂಕು ಆಡಳಿತ ಸೌಧವನ್ನೂ ನಿರ್ಮಿಸಿತು. ಹೊಸದಾಗಿರುವಾಗ ಎಲ್ಲವೂ ವ್ಯವಸ್ಥಿತವಾಗಿರುವಂತೆ ಕಂಡು ಬಂದಿದ್ದರೂ ದಿನ ಕಳೆದಂತೆ ಆಡಳಿತ ಸೌಧ ಕಟ್ಟಡದಲ್ಲಿ ಒಂದೊಂದೇ ಸಮಸ್ಯೆಗಳು ಕಾಣಿಸಲಾರಾಂಭಿಸಿದವು. ಕಾಲಕಾಲಕ್ಕೆ ನಿರ್ವಹಣೆ, ರಿಪೇರಿಗಳೂ ನಡೆಯುತ್ತಿತ್ತು. ಇದೀಗ ಸೌಧದ ಲಿಫ್ಟ್ ಕೆಟ್ಟು ನಿಂತಿದೆ. ತಿಂಗಳೇ ಕಳೆದರೂ ಇದರ ರಿಪೇರಿಯಾಗಿಲ್ಲ.

ಸೌಧದ ಪ್ರಥಮ ಮಹಡಿಯಲ್ಲಿ ಉಪ ನೋಂದಣಿ ಕಚೇರಿ ಇದೆ. ದಿನವೂ ಸಾವಿರಾರು ಜನರು ಬಂದು ಹೋಗುವ ಸರ್ಕಾರಿ ಕಚೇರಿ ಇದು. ಪ್ರಥಮ ಮಹಡಿಗೆ ಮೆಟ್ಟಿಲುಗಳು ಮತ್ತು ಲಿಫ್ಟ್ ವ್ಯವಸ್ಥೆ ಇತ್ತು. ಆದರೆ, ಇದೀಗ ಲಿಫ್ಟ್ ಹಾಳಾಗಿದೆ. ಹಿರಿಯ ನಾಗರಿಕರು, ವಿಶೇಷಚೇತನರು, ಬಸುರಿ ಬಾಣಂತಿಯರೂ ಆಗಮಿಸುವ ಈ ಕಚೇರಿಗೆ ಈಗ ಎಲ್ಲರೂ ಮೆಟ್ಟಿಲು ಹತ್ತಿಕೊಂಡೇ ಬರಬೇಕಾಗಿದೆ. ವಿಶೇಷ ಚೇತನರು ಹಾಗೂ ವಯೋ ವೃದ್ಧರಿಗೆ ಇದು ಭಾರೀ ಸಮಸ್ಯೆ ತಂದೊಡ್ಡಿದೆ. ಇಂತಹವರನ್ನು ಈ ಮೆಟ್ಟಿಲುಗಳಲ್ಲಿ ಎತ್ತಿಕೊಂಡೇ ಉಪನೊಂದಾವಣಾ ಕಚೇರಿಗೆ ಹೋಗಬೇಕಾಗಿದೆ. ಇದು ವೃದ್ಧರು ಮಾತ್ರವಲ್ಲದೆ ಅವರನ್ನು ಕರೆತರುವವರಿಗೂ ತ್ರಾಸದಾಯಕವಾಗಿದೆ. ಲಿಫ್ಟ್ ಕೆಟ್ಟು ತಿಂಗಳ ಮೇಲಾಗಿದೆ. ಅಧಿಕಾರಿಗಳ ಗಮನಕ್ಕೂ ಬಂದಿದೆ. ಆದರೆ, ಅಸಹಾಯಕರಾದ ಅವರು ಏನೂ ಮಾಡುವಂತಿಲ್ಲ. ಜನಪ್ರತಿನಿಧಿಗಳು ಮೌನವಾಗಿದ್ದಾರೆ.

ಈ ಆಡಳಿತ ಸೌಧದಲ್ಲಿ ದಿನವೂ ಸಾವಿರಾರು ಜನರು ಭೇಟಿ ಕೊಡುವ ಉಪ ನೋಂದಣಿ ಕಚೇರಿ ಮೊದಲ ಮಹಡಿಯಲ್ಲಿದೆ. ವಾಸ್ತವವಾಗಿ ಇದು ನೆಲ ಅಂತಸ್ತಿನಲ್ಲೇ ಇರಬೇಕಿತ್ತು. ಆದರೆ ಹೆಚ್ಚು ಜನರ ಓಡಾಟವಿರದ ಚುನಾವಣಾ ಕಚೇರಿ ನೆಲ ಅಂತಸ್ತಿನಲ್ಲಿದೆ. ಇದು ಯಾವ ನಿಯಮವೋ ಅರ್ಥವಾಗುತ್ತಿಲ್ಲ.

ಗ್ಯಾರೆಂಟಿಗಳು, ಭಾಗ್ಯಗಳನ್ನು ನೀಡುತ್ತಾ ಸರ್ಕಾರ ಜನಪರವಿದೆ ಎಂದು ಘೋಷಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಬಹುಷಃ ಇದೂ ಒಂದು ಭಾಗ್ಯವೇ ಇರಬಹುದು ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ. ಇನ್ನಾದರೂ ಸಂಬಂಧಿತರು ಈ ಬಗ್ಗೆ ಗಮನ ಹರಿಸಿ, ಜನರ ತೊಂದರೆ ನೀಗಿಸುವರೇ ಕಾದು ನೋಡಬೇಕು. ಈ ಅವ್ಯವಸ್ಥೆಗಳಿಂದ ಹೈರಾಣಾದ ಜನರು ಆಕ್ರೋಶಗೊಂಡಿದ್ದಾರೆ. ಇನ್ನು ವಿಳಂಬವಿಲ್ಲದೆ ಜಿಲ್ಲಾಡಳಿತ ಲಿಫ್ಟ್ ಸರಿಪಡಿಸಿ, ಇಲ್ಲಿನ ಅವ್ಯವಸ್ಥೆಗಳನ್ನು ನೀಗಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article