ರಸ್ತೆಬದಿ ಮೃತದೇಹ ಪ್ರಕರಣ: ಪ್ರತಿಭಟನೆ-ಆರೋಪಿ ಬಂಧನಕ್ಕೆ 2 ದಿನ ಗಡುವು

ರಸ್ತೆಬದಿ ಮೃತದೇಹ ಪ್ರಕರಣ: ಪ್ರತಿಭಟನೆ-ಆರೋಪಿ ಬಂಧನಕ್ಕೆ 2 ದಿನ ಗಡುವು


ಪುತ್ತೂರು: ಕಾರ್ಮಿಕ ಶಿವಪ್ಪ ಮೃತಪಟ್ಟು ಅವರ ಮೃತದೇಹವನ್ನು ತಂದಿಟ್ಟ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಶಿವಪ್ಪರವರು ಕೆಲಸ ಮಾಡುತ್ತಿದ್ದ ಮಾಲೀಕ ಹೆನ್ರಿ ತಾವ್ರೋರನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿ ಆದಿದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಎಸ್‌ಡಿಪಿಐ ಬೆಂಬಲದೊಂದಿಗೆ ಶುಕ್ರವಾರ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ಮಾತನಾಡಿ, ಶಿವಪ್ಪರ ಮೃತದೇಹವನ್ನು ತಂದು ಇರಿಸಿದ ರೀತಿ ಅಮಾನವೀಯವಾಗಿದ್ದು, ಇಂತಹಾ ನೀಚ ಕೃತ್ಯವನ್ನು ಎಸಗುವ ಮೂಲಕ ಹೆನ್ರಿ ತಾವ್ರೋ ದಲಿತ ಸಮುದಾಯವನ್ನು ಶೋಷಣೆ ಮಾಡಿದ್ದಾರೆ. ಘಟನೆ ನಡೆದು ಆರು ದಿನಗಳು ಕಳೆದರೂ ಹೆನ್ರಿ ತಾವ್ರೋ ಅವರನ್ನು ಪೊಲೀಸ್ ಇಲಾಖೆ ಇನ್ನೂ ಬಂಧಿಸಿಲ್ಲ. ಬಂಧಿಸುವಂತೆ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಈಗಾಗಲೇ ನೀಡಿದ್ದೇವೆ. ಇನ್ನು ಎರಡು ದಿನಗಳಲ್ಲಿ ಬಂಧಿಸದಿದ್ದಲ್ಲಿ ಮುಂದಿನ ಹೋರಾಟವನ್ನು ದಲಿತ ಸಂಘಟನೆಗಳನ್ನು ಸೇರಿಸಿಕೊಂಡು ಪೊಲೀಸ್ ಠಾಣೆಯ ವಿರುದ್ಧವೇ ಹಮ್ಮಿಕೊಳ್ಳಲಿದ್ದೇವೆ. ಆಗ ಪೊಲೀಸರು ನಮ್ಮವರನ್ನು ಬಂಧಿಸಲಿ ನೋಡೋಣ ಎಂದು ಎಚ್ಚರಿಕೆ ನೀಡಿದರು.

ಆದಿದ್ರಾವಿಡ ಸಂಘದ ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ಘಟನೆಗೆ ಸಂಬಂಧಿಸಿ ಸ್ಮಾನ್ಲಿ ಎಂಬಾತನನ್ನ ಈಗಾಗಲೇ ಬಂಧಿಸಿದ್ದಾರೆ. ಆದ್ರೆ ಪಮುಖ ಆರೋಪಿ ಹೆನ್ರಿ ತಾವ್ರೋ ಅವರನ್ನು ಬಂಧಿಸಲಿಲ್ಲ. ಇದರಲ್ಲಿ ರಾಜಕೀಯ ಒತ್ತಡವಿದೆ. ಹೆನ್ರಿಯನ್ನ ಬಂಧಿಸದೇ ಇರುವ ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯ ವೈಖರಿ ಬಗ್ಗೆ ಅನುಮಾನವಿದೆ. ಇದರ ಹಿಂದೆ ರಾಜಕೀಯ ಒತ್ತಡವಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು. ತಕ್ಷಣ ಹೆನ್ರಿ ತಾವ್ರೋ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಮುಖಂಡ ಅಬೂಬಕ್ಕರ್ ಸಿದ್ದಿಕ್ ಮಾತನಾಡಿ, ಇಡೀ ದೇಶದ ನಾಗರಿಕರು ತಲೆತಗ್ಗಿಸುವಂತ ಅಮಾನವೀಯ ಘಟನೆಯಾಗಿದೆ. ವಿವಿಧ ರೀತಿಯಲ್ಲಿ ಮನವಿ ಮಾಡಿದರೂ ಇಲ್ಲಿಯ ತನಕ ಹೆನ್ರಿ ತಾವ್ರೋರನ್ನು ಬಂಧಿಸದಿರುವುದು ದುರಾದೃಷ್ಠ. ಬಂಧಿಸದೇ ಇರುವುದಕ್ಕೆ ರಾಜಕೀಯ ಸಪೋರ್ಟ್ ಇರಬಹುದು. ತಕ್ಷಣ ಅವರ ಹೋರಾಟಕ್ಕೆ ಸ್ಪಂದಿಸಿ ಬಂಧಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಸಂಘದ ತಾಲೂಕು ಅಧ್ಯಕ್ಷ ಬಾಬು ಮರಿಕೆ, ದಲಿತ ಮುಖಂಡರಾದ ಚಂದ್ರಶೇಖರ, ಲಕ್ಷ್ಮೀ ಸುಬ್ರಹ್ಮಣ್ಯ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಲೋಹಿತ್, ಯುವ ವೇದಿಕೆ ಅಧ್ಯಕ್ಷ ಮೋಹನ್ ಸಂಟ್ಯಾರ್, ಮೃತ ಶಿವಪ್ಪರ ಪುತ್ರಿ ಉಷಾ, ದಲಿತ ಮುಖಂಡರಾದ ಮುಖೇಶ್ ಕೆಮ್ಮಿಂಜೆ, ಮಹೇಶ್ ಮರಿಕೆ, ಬಾಲಕೃಷ್ಣ ದೊಡ್ಡೇರಿ ಮತ್ತಿತರರು ಪಾಲ್ಗೊಂಡಿದ್ದರು. 

ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರಿಗೆ ಹೆನ್ರಿ ತಾವ್ರೋ ಅವರನ್ನು ಶೀಘ್ರ ಬಂಧಿಸುವಂತೆ ಕ್ರಮಕೈಗೊಳ್ಳಬೇಕು ಎಂದು ದಲಿತ ಸಂಘಟನೆಯವರು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿ ಭರವಸೆ ನೀಡಿದರು. 

ಪುತ್ತೂರು ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘಟನೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು. ಆದರೆ ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಸಂಘಟನೆಯ ಪ್ರಮುಖರಲ್ಲಿ ಮಹಾಲಿಂಗೇಶ್ವರ ದೇವರು ಹಾಗೂ ಮಕ್ಕಳ ಮೇಲೆ ಆಣೆಪ್ರಮಾಣ ಹಾಕಿ ಆರೋಪಿ ಹೆನ್ರಿ ತಾವ್ರೋನನ್ನು ಬಂಧಿಸುವುದಾಗಿ ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಅಮರ್ ಜವಾನ್ ಸ್ಮಾರಕದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನೆಯಲ್ಲಿದ್ದ ಆದಿದ್ರಾವಿಡ ಸಮಿತಿ ಪುತ್ತೂರು ಘಟಕದ ಅಧ್ಯಕ್ಷ ಬಾಬು ಮರಿಕೆ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article