
ಕಾರು ಅಡ್ಡಗಟ್ಟಿ ಹಲ್ಲೆ-ಜೀವಬೆದರಿಕೆ
Friday, November 29, 2024
ಬಂಟ್ವಾಳ: ಬೈಕ್ ಸವಾರರಿಬ್ಬರು ಕಾರೊಂದನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ ಕಾರಿನಲ್ಲಿದ್ದ ಇಬ್ಬರಿಗೆ ಹಲ್ಲೆಗೈದು ಜೀವಬೆದರಿಕೆ ಒಡ್ಡಿದ ಘಟನೆ ಬಿ.ಸಿ. ರೋಡಿಗೆ ಸಮೀಪದ ಮಿತ್ತಬೈಲು ಬಳಿ ಸಂಭವಿಸಿದೆ.
ಸಂಗಬೆಟ್ಟು ಗ್ರಾಮದ ಕಿಶನ್ ಶೆಟ್ಟಿ ಹಾಗೂ ರೋಷನ್ ಎಂಬವರು ಮಂಗಳೂರಿನಿಂದ ಕಾರಿನಲ್ಲಿ ಸಿದ್ದಕಟ್ಟೆ ಕಡೆಗೆ ಸಂಚರಿಸುತ್ತಿದ್ದಾಗ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಆಕ್ಟಿವಾ ಸ್ಕೂಟರಿನಲ್ಲಿ ಬರುತ್ತಿದ್ದ ಅಪರಿಚಿತ ಯುವಕರಿಬ್ಬರು, ನಿರಂತರವಾಗಿ ಹಾರ್ನ್ ಹಾಕುತ್ತಾ ಹಿಂಬಾಲಿಸಿಕೊಂಡು ಬಂದಿದ್ದರು.
ಮಿತ್ತಬೈಲು ತಲುಪಿದಾಗ, ಸ್ಕೂಟರ್ ಸವಾರರು ಕಾರನ್ನು ಅಡ್ಡ ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಕಾರಿನಲ್ಲಿದ್ದ ಇಬ್ಬರಿಗೂ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕಿಶನ್ ಶೆಟ್ಟಿ ಅವರ ದೂರಿನಂತೆ ಪ್ರಕರಣ ದಾಖಲಾಗಿದೆ.