ಸುಜೀರು ಶ್ರೀ ದೇವಕಿಕೃಷ್ಣ ರವಳನಾಥ ದೇವಳಕ್ಕೆ ಕಳ್ಳರ ಲಗ್ಗೆ: ನಗ-ನಗದು ದೋಚಿ ಪರಾರಿ

ಸುಜೀರು ಶ್ರೀ ದೇವಕಿಕೃಷ್ಣ ರವಳನಾಥ ದೇವಳಕ್ಕೆ ಕಳ್ಳರ ಲಗ್ಗೆ: ನಗ-ನಗದು ದೋಚಿ ಪರಾರಿ


ಬಂಟ್ವಾಳ: ರಾ.ಹೆ. ಫರಂಗಿಪೇಟೆ ಸಮೀಪದ ಸುಜೀರುವಿನಲ್ಲಿ ಹೆದ್ದಾರಿಗೆ ತಾಗಿಕೊಂಡಿರುವ ಶ್ರೀ ದೇವಕಿಕೃಷ್ಣ ರವಳನಾಥ ದೇವಳದ ಹಿಂಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿರುವ ಕಳ್ಳರ ತಂಡವೊಂದು ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ವಸ್ತು, ನಗದನ್ನು ದೋಚಿ ಪರಾರಿಯಾಗಿದ್ದು, ಕಳ್ಳರ ಕಳವಿನ ಕೃತ್ಯ ಸಹಿತ ಎಲ್ಲಾ ಕರಾಮತ್ತುಗಳು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಗಳೂರಿನ ಸುಜೀರ್ ಕಾರ್ ಕುಟುಂಬಕ್ಕೆ ಸೇರಿದೆಯೆನ್ನಲಾದ ಈ ದೇವಳಕ್ಕೆ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸೋಮವಾರ ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ದೇವಳದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಅನಾಧಿಕಾಲದಲ್ಲಿ ಹಿರಿಯರು ಮಾಡಿಸಿರುವಂತ ಸುಮಾರು ಒಂದೂವರೆ ಕೆ.ಜಿ. ತೂಕದ ಬೆಳ್ಳಿಯ ದೇವರ ಪೀಠ, ಚಿನ್ನದ ದೇವರ ಮೂಗುತಿ, ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ, 3 ಪವನ್ ಚಿನ್ನ ಮತ್ತು ಹುಂಡಿಯಿಂದ ನಗದನ್ನು ದೋಚಿ ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಭಾನುವಾರ ಶ್ರೀ ದೇವಕಿಕೃಷ್ಣ ರವಳನಾಥ ದೇವಳದಲ್ಲಿ ಹಗಲು ಹೊತ್ತು ವಿಶೇಷವಾದ ‘ಶ್ರೀನಿವಾಸ ಕಲ್ಯಾಣ’ ಪೂಜಾ ಕಾರ್ಯಕ್ರಮವಿದ್ದು, ಹುಂಡಿಯಲ್ಲಿಯು ಹತ್ತು ಸಾವಿರಕ್ಕೂ ಅಧಿಕ ಹಣ ಇರಬಹುದೆಂದು ಅಂದಾಜಿಸಲಾಗಿದೆ. ಕಾರ್ಯಕ್ರಮದ ಬಳಿಕ ಬಂದಿದ್ದವರೆಲ್ಲರೂ ಮನೆಗೆ ತೆರಳಿದ್ದು, ಇಲ್ಲಿನ ಅರ್ಚಕರು ಕೂಡ ಎಂದಿನಂತೆ ರಾತ್ರಿ ಪೂಜೆ ಮುಗಿಸಿ ತಮ್ಮಮನೆಗೆ ತೆರಳಿದ್ದರು.

ಸಿ.ಸಿ. ಕ್ಯಾಮರಾದಲ್ಲಿ ಸೆರೆ:

ಕಳವು ಕೃತ್ಯಗೈದಲ್ಲಿ ಆರು ಮಂದಿ ಇದ್ದು, ಇವರ ಚಲನವಲನ ವೃತ್ತಿಪರ ಕಳ್ಳರಂತೆ ಕಂಡು ಬಂದಿದ್ದು, ಸಿಸಿ ಕ್ಯಾಮರಗಳನ್ನು ಗಮನಿಸಿಯು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಅಂಜಿಕೆಯಿಲ್ಲದೆ ಕಳವು ಕೃತ್ಯ ನಡೆಸಿ, ದೇವಳದಿಂದ ತೆರಳುತ್ತಿರುವುದು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳರು ವಾಹನದಲ್ಲಿ ಬಂದು ಕೃತ್ಯದ ಬಳಿಕ ಅದೇ ವಾಹನದಲ್ಲೇ ತೆರಳಿರುವುದು ಕೂಡ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.

ಮುಂಜಾನೆ ಸುಮಾರು 3.30 ರ ಹೊತ್ತಿಗೆ ದೇವಸ್ಥಾನಕ್ಕೆ ಮುಸುಕುಧಾರಿಗಳಾಗಿ ಬಂದಿದ್ದ ಕಳ್ಳರ ಪೈಕಿ ಮೂವರು  ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ್ದಾರೆ. ಇನ್ನುಳಿದ ಮೂವರು ದೇವಸ್ಥಾನದ ಸುತ್ತಲೂ ತಿರುಗಾಡಿದ್ದಾರೆ, ಇಬ್ಬರು ಗರ್ಭಗುಡಿಯ ಒಳಗೆ ಪ್ರವೇಶಿಸಿ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬರುತ್ತಾರೆ. ಹೊರಾಂಗಣದಲ್ಲಿ ಒರ್ವಾತ ಟಾಚ್೯ ಲೈಟ್ ಹಾಕುತ್ತಿರುತ್ತಾನೆ. ಗೋಪುರದಲ್ಲಿ ಕಳ್ಳತನ ಮಾಡಿದ ಎಲ್ಲಾ ವಸ್ತುಗಳನ್ನು ಒಂದೇ ಚೀಲದಲ್ಲಿ ತುಂಬಿಸಿ ವಾಪಸು ಹೋಗುವ ದೃಶ್ಯ ಕಂಡು ಬಂದಿದೆ. ಕಳ್ಳರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುವುದು ಕೂಡ ಕಂಡು ಬಂದಿದೆ. ಕೃತ್ಯದ ಬಳಿಕ 4 ಗಂಟೆಯ ಅಂದಾಜಿಗೆ ದೇವಳದಿಂದ ಹೊರಗೆ ತೆರಳಿದ್ದಾರೆ.

‘ಸುಳಿವು ನೀಡಿದ ಶ್ವಾನ’:

ದೇವಳದ ಕಂಪೌಂಡ್ ಒಳಗಯೇ ಅರ್ಚಕರ ಮನೆಯಿದೆ. ಹೀಗಿದ್ದು ಕಳ್ಳರು ಯಾವುದೇ ಅಂಜಿಕೆಯಿಲ್ಲದೆ ಕಳ್ಳತನ ಗೈದು ತಲೆಮರೆಸಿದ್ದಾರೆ. ಕಳ್ಳರು ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಅರ್ಚಕರ ಸಾಕು ನಾಯಿ ಗಮನಿಸಿ ಜೋರಾಗಿ ಬೊಗಳಲಾರಂಭಿಸಿದೆ. ಆಗ ಎಚ್ಚರಗೊಂಡ ಅರ್ಚಕರು, ಸುತ್ತಮುತ್ತ ನೋಡಿದ್ದಾರೆ. ತಕ್ಷಣ ಸಿ.ಸಿ. ಕ್ಯಾಮರಾವನ್ನು ಪರಿಶೀಲಿಸಿದಾಗ ದೇವಳದೊಳಗೆ ಮೂವರು ಕಂಡುಬಂದಿದ್ದಾರೆ. ಕೂಡಲೇ ಅರ್ಚಕರು ದೇವಸ್ಥಾನದ ಮ್ಯಾನೇಜರ್ ಅವರಿಗೆ ಮಾಹಿತಿ ನೀಡಿದ್ದಾರೆ. ದೇವಳದ ಹೊರಗಡೆ ಮೂವರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ನಿಂತಿದ್ದು, ಮೂವರು ದೇವಸ್ಥಾನದ ಒಳಗೆ ಇದ್ದು, ನನಗೆ ಒಬ್ಬನಿಗೆ ಹೋಗಲು ಭಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಕೂಡಲೇ ಮೆನೇಜರ್ ಅವರು ದೇವಳಕ್ಕೆ ಬಂದರಾದರೂ ಅದಾಗಲೇ ಕಳ್ಳರು ಕೃತ್ಯ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಪೊಲೀಸರಿಗೆ ಮಾಹಿತಿ:

ಕಳವು ಕೃತ್ಯವನ್ನು ಖಚಿತಪಡಿಸಿಕೊಂಡ ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ. ಸುದ್ದಿತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ಹರೀಶ್ ಮತ್ತು ಮೂರ್ತಿ ಬೇಟಿ ನೀಡಿ ಪರಿಶೀಲಿಸಿದ್ದಾರೆ.

ಶ್ವಾನದಳ ಮತ್ತು ಬೆರಳಚ್ಚುತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದೆ. ಕಳವಾದ ಒಟ್ಟು ವಸ್ತುಗಳ ಮೌಲ್ಯ 2.30 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ಚಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಮುಂದಿನ ತನಿಖೆ ನಡೆಯತ್ತಿದೆ. ಕಳ್ಳರ ಕರಾಮತ್ತಿನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article