
ಅಂಬಿಕಾ ಪಪೂ ಕಾಲೇಜಿನ ಎಡವಟ್ಟು..: ಕ್ರೀಡಾ ಪ್ರತಿಭೆಗೆ ‘ಅನ್ಯಾಯ’ ಪ್ರತಿಭಟನೆಗೆ ನಿರ್ಧಾರ
ಪುತ್ತೂರು: ರಾಷ್ಟ್ರಮಟ್ಟದ ಕ್ರೀಡಾಪಟುವಿನ ಪ್ರತಿಭೆಗೆ ತಾನು ಕಲಿಯುತ್ತಿರುವ ಕಾಲೇಜೇ ಕೊಡಲಿ ಏಟು ಹಾಕಿರುವ ಪ್ರಕರಣವೊಂದು ಪುತ್ತೂರಿನಲ್ಲಿ ನಡೆದಿದ್ದು, ಈ ಕಾಲೇಜಿನ ವಿರುದ್ಧ ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಮರಾಟಿ ಸಂಘದ ಜಿಲ್ಲಾ ಸಮಿತಿ ತಿಳಿಸಿದೆ.
ಸೋಮವಾರ ಪುತ್ತೂರು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಜಿಲ್ಲಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ್ ಅವರು ಮಧ್ಯಪ್ರದೇಶದಲ್ಲಿ ನಡೆದಿರುವ ಅಖಿಲ ಭಾರತೀಯ ವಿದ್ಯಾಭಾರತಿ ಪ್ರಾಂತೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಿದ್ದ ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯ ನೋಂದಣಿಯನ್ನೇ ಮಾಡದೆ ಅಂಬಿಕಾ ಪಪೂ ಕಾಲೇಜು ಆಡಳಿತ ವಿದ್ಯಾರ್ಥಿಗೆ ಅನ್ಯಾಯ ಮಾಡಿದೆ. ಈ ಅನ್ಯಾಯದ ವಿರುದ್ಧ ಅಂಬಿಕಾ ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.
ಅಂಬಿಕಾ ಕಾಲೇಜಿನ ಈ ವಿದ್ಯಾರ್ಥಿಯನ್ನು ಅಂಬಿಕಾ ಕಾಲೇಜು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕಳುಹಿಸಿತ್ತು. ವಿದ್ಯಾರ್ಥಿ ಮಧ್ಯಪ್ರದೇಶದ ಸಾತ್ನಾ ಕ್ರೀಡಾಂಗಣಕ್ಕೆ ತಲುಪಿದಾಗ ಅಂಬಿಕಾ ಕಾಲೇಜು ಮಾಡಿರುವ ಎಡವಟ್ಟು ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಲೇಜಿಗೆ ಕರೆ ಮಾಡಿದಾಗ ಇಲ್ಲಿನ ಸಿಬಂದಿಗಳು ಹಾರಿಕೆ ಉತ್ತರ ನೀಡುವ ಮೂಲಕ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದರು.
ಹಳ್ಳಿ ಪ್ರತಿಭೆಗೆ ಅನ್ಯಾಯ:
ರಾಜ್ಯಮಟ್ಟದಲ್ಲಿ ಎತ್ತರ ಜಿಗಿತದಲ್ಲಿ ನೂತನ ದಾಖಲೆ ಸೃಷ್ಟಿಸಿರುವ ಗ್ರಾಮೀಣ ಭಾಗ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ನಿವಾಸಿಯಾಗಿರುವ ವಿದ್ಯಾರ್ಥಿ ಅಕ್ಷತ್ ಕುಮಾರ್ ಎಸ್‌ಟಿ ಸಮುದಾಯದ ಪ್ರತಿಭೆಯಾಗಿದ್ದಾನೆ. ಇದಕ್ಕಾಗಿಯೇ ಈತನ ಸಾಧನೆಗೆ ಅಂಬಿಕಾ ಪಪೂ ಕಾಲೇಜು ಅನ್ಯಾಯವೆಸಗಿದೆ. ಕೇವಲ 2 ನಿಮಿಷದ ನೋಂದಣಿ ಕೆಲಸ ಇವರಿಂದ ಮಾಡಲಾಗಿಲ್ಲ ಎಂದರೆ ಏನರ್ಥ. ಇಂತಹ ಕ್ರೀಡಾ ಪ್ರತಿಭೆಗೆ ಅನ್ಯಾಯ ಮಾಡಿದ್ದಕ್ಕೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲ ಹಾಗೂ ಜವಾಬ್ದಾರಿ ವಹಿಸಿಕೊಂಡ ಶಿಕ್ಷಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಅಂಬಿಕಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಯ ನೋಂದಣಿಯನ್ನೇ ಮಾಡದೆ ಕ್ರೀಡಾಕೂಟಕ್ಕೆ ಕಳುಹಿಸುವ ಮೂಲಕ ಆತನ ಕ್ರೀಡಾ ಪ್ರತಿಭೆಗೆ ಅಪಮಾನ ಮಾಡಿದೆ. ಇದರಿಂದ ವಿದ್ಯಾರ್ಥಿಯ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗಿದೆ. ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ತೆರಳಿ ಅಲ್ಲಿ ಕಾಲೇಜು ಮಾಡಿದ ಎಡವಟ್ಟಿನಿಂದ ಕ್ರೀಡೆಗಳಲ್ಲಿ ಭಾಗಿಯಾಗದಂತಹ ಸ್ಥಿತಿ ಉಂಟಾಗಿ ಆತನ ಮನಸ್ಸಿಗೆ ಆದ ಆಘಾತಕ್ಕೆ ಹೊಣೆಯನ್ನು ಅಂಬಿಕಾ ಕಾಲೇಜು ಹೊರಬೇಕು. ಅನ್ಯಾಯವಾಗಿರುವ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ ಅವರು ಕಾಲೇಜಿನ ಯಾವುದೇ ಮಕ್ಕಳಿಗೆ ಇಂತಹ ಅನ್ಯಾಯ ಇನ್ನು ಮುಂದೆ ಆಗಬಾರದು ಎಂದು ಎಚ್ಚರಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಯ ತಂದೆ ಈಶ್ವರ ನಾಯ್ಕ್, ಮರಾಟಿ ಸಂರಕ್ಷಣಾ ಸಮಿತಿ ಮುಖಂಡರಾದ ಅಣ್ಣು ನಾಯ್ಕ್, ನಾರಾಯಣ ನಾಯ್ಕ್ ಮತ್ತು ಶಿವಪ್ಪ ನಾಯ್ಕ್ ಇದ್ದರು.