
ಮಗುವಾದ ಬಳಿಕ ಕೆಲಸಕ್ಕೆ ಹೋಗಲಾರದ ಕೊರಗು: ಶಿಕ್ಷಕಿ ಆತ್ಮಹತ್ಯೆ
ಕಾರ್ಕಳ: ಕಷ್ಟಪಟ್ಟು ಓದಿ ಸ್ವಾವಲಂಬಿ ಬದುಕಿನ ಕನಸು ಕಂಡು ಮದುವೆಯಾಗಿ, ಮಗುವಾದ ಬಳಿಕ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಖಿನ್ನತೆಗೊಳಗಾಗಿ ಅತಿಥಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಡೆದಿದೆ. ಪ್ರಸನ್ನಾ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೂಡುಬಿದಿರೆಯ ನಿವಾಸಿ ಪ್ರಸನ್ನಾ ಕಾರ್ಕಳ ತಾಲೂಕು ಈದು ಗ್ರಾಮದ ರಾಜೇಶ್ ಎಂಬವರೊಂದಿಗೆ 2022ರಲ್ಲಿ ಮದುವೆಯಾಗಿತ್ತು. ರಾಜೇಶ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸನ್ನಾ ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಮದುವೆಯಾಗಿ 10 ತಿಂಗಳ ಹೆಣ್ಣು ಮಗು ಇದ್ದು, ಈಕೆ ತನ್ನ ತಾಯಿ ಮನೆಗೆ ಫೋನಾಯಿಸಿ ಗಂಡನ ಮನೆಯವರು ಚೆನ್ನಾಗಿ ನೋಡುತ್ತಿದ್ದಾರೆಂದು ಹೇಳುತ್ತಿದ್ದಳು. ಆದರೆ ನನಗೆ ಇಷ್ಟು ಬೇಗ ಮಗು ಬೇಡವಾಗಿತ್ತು ನಾನು ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಇದೇ ಕೊರಗಿನಿಂದ ಖಿನ್ನತೆಗೆ ಒಳಗಾಗಿದ್ದಳು. ಈ ಬಗ್ಗೆ ಪ್ರಸನ್ನಾ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪ್ರಸನ್ನಾ ತಾನು ಇಷ್ಟು ಓದಿದರೂ ತನಗೆ ಮಗುವಾದ ಕಾರಣ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿ ನ.6 ರಂದು ಸಂಜೆ ಗಂಡನ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.