ಭಾಷೆ ವ್ಯವಹಾರವಾದಾಗ ಅದರ ರಹಸ್ಯ ಗೊತ್ತಾಗದು: ಚಿಂತಕ ಲಕ್ಷ್ಮೀಶ ತೋಳ್ಪಾಡಿ

ಭಾಷೆ ವ್ಯವಹಾರವಾದಾಗ ಅದರ ರಹಸ್ಯ ಗೊತ್ತಾಗದು: ಚಿಂತಕ ಲಕ್ಷ್ಮೀಶ ತೋಳ್ಪಾಡಿ


ಕಟೀಲು: ಭಾಷೆಯನ್ನು ನಿಜವಾಗಿ ಪ್ರೀತಿಸಿದರೆ ಗೊತ್ತಾಗುವುದು ಅದರ ಯಾತನೆ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಅವರು ಕಟೀಲಿನಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ನಾಲ್ಕನೆಯ ವರುಷದ ಭ್ರಮರ ಇಂಚರ ನುಡಿಹಬ್ಬದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾತು, ಚಿಂತನೆ, ಬರವಣಿಗೆ ಹೀಗೆ ಭಾಷೆಯಲ್ಲಿ ಕೆಲಸ ಮಾಡುವವನಾಗಿ ಅನಿಸಿದ್ದು, ಭಾಷೆಯನ್ನು ನಿಜವಾಗಿ ಪ್ರೀತಿಸಿದರೆ, ಭಾಷೆಯ ನೋವು ಗೊತ್ತಾಗುತ್ತದೆ. ಯಾತನೆ, ಒಳಗುದಿ ಗೊತ್ತಾಗುತ್ತದೆ. ಕೇವಲ ವ್ಯಾವಹಾರಿಕವಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಭಾಷೆಯನ್ನು ಬಳಸುತ್ತಾರೆಯೇ ಹೊರತು ರಹಸ್ಯ ತಿಳಿಯುವ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಹಾಗಾಗಿ ಭಾಷೆಯೂ ತನ್ನ ಗುಟ್ಟನ್ನು ಅಥವಾ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ಭಾಷೆಯನ್ನು ಪ್ರೀತಿಸಬೇಕು. ಬಳಸಿಕೊಳ್ಳುವುದಲ್ಲ. ಕಣ್ಣು ನೋಡುವಂತಹದ್ದು. ಕಣ್ಣಿನ ಕಣ್ಣು ಎಂದರೆ ನೀನಲ್ಲ ನಿನ್ನೊಳಗಡೆ ಇನ್ನೊಂದು ಇದೆ ಎನ್ನುವ ರಹಸ್ಯ ಗೊತ್ತಾಗುತ್ತದೆ. ಮನಸ್ಸಿನ ಮನಸ್ಸು. ಪ್ರಾಣದ ಪ್ರಾಣ ಹೀಗೆ ಭಾಷೆಗೆ ತಿಳಿಸುವ ತುಡಿತ ಇದೆ ಎಂದರು.

ಭಾಷೆ ತನ್ನ ರಹಸ್ಯವನ್ನು ಬಿಟ್ಟುಕೊಡುವುದು ಹೇಗೆ? ಪದವನ್ನು ಇನ್ನೊಮ್ಮೆ ಬಳಸಬೇಕು. ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಿದಾಗ ಮನಸ್ಸು ಅದಕ್ಕೆ ಸ್ಪಂದಿಸಿದಾಗ ಜಡವಾಗುತ್ತದೆ. ಆದರೆ ಮತ್ತೆ ಮತ್ತೆ ಹೇಳಿದೆ ವಿಧಿಯಿಲ್ಲ. ಮೊತ್ತಮೊದಲು ಕೇಳಿದಾಗ ಹೇಗೆ ಎಚ್ಚರದಲ್ಲಿ ಕೇಳುತ್ತೇವೋ ಹಾಗೆ ಎರಡನೆಯ ಬಾರಿಗೆ ಕೇಳಿದಾಗ ಆ ರಹಸ್ಯ ಗೊತ್ತಾಗುತ್ತದೆ. ದೇವರನ್ನು ಎಷ್ಟು ತಿಳಿದರೂ ದೇವರು ನಮಗೆ ತಿಳಿದಷ್ಟು ಅಲ್ಲ. ಹಾಗೆಯೇ ಭಾಷೆಯೂ. ಮನುಷ್ಯ ಗೆಲ್ಲಬೇಕಾದ ಎರಡು ಸಂಗತಿಗಳು. ಒಂದು ನಿದ್ರೆ. ಇನ್ನೊಂದು ಪ್ರತಿಭೆ. ನಾವು ಬದುಕಿಗೆ ಕೃತಜ್ಞರೇ ಆಗಬೇಕು. ಅಂತಹ ಬದುಕು ಅಥವಾ ಜೀವನವೇ ತಾಯಿ. ಮಾತೇ ಇಲ್ಲದಿದ್ದರೂ ತಾಯಿ ಅಂದರೆ ದೇವಿ ಮೌನದಲ್ಲೇ ಮಾತನಾಡುತ್ತಾಳೆ. ಜ್ಞಾನ ಅಂದರೆ, ಸಮೃದ್ಧಿ ಅಂದರೆ ಭಾಷೆ. ಆವೇಶ ಅಂದರೂ ಭಾಷೆ ಎಂದು ಹೇಳಿದರು.

ಖ್ಯಾತ ಕಥೆಗಾರ ಬಾಗಲೋಡಿ ದೇವರಾಯರು, ಕೆ.ಪಿ. ರಾಯರು, ಕುವೆಂಪು, ಮಾಸ್ತಿ, ಡಿವಿಜಿ ಹೀಗೆ ಖ್ಯಾತ ಸಾಹಿತಿಗಳೆಲ್ಲರೂ ಓದಿದ್ದು ಕನ್ನಡ ಶಾಲೆಯಲ್ಲಿ. ನೋಬೆಲ್ ಪ್ರಶಸ್ತಿಗೆ ಯೋಗ್ಯವಾದ ಮಹತ್ವದ ಗ್ರಂಥಗಳನ್ನು ಬರೆದವರು. ಕಟೀಲು ಪರಿಸರದಲ್ಲಿ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು, ಶಿಮಂತೂರು ನಾರಾಯಣ ಶೆಟ್ಟಿ, ಪು. ಶ್ರೀನಿವಾಸ ಭಟ್, ಅಜಾರು ನಾಗರಾಜರಾಯರು, ಉದಯಕುಮಾರ ಹಬ್ಬು ಶ್ರೀಧರ ಡಿ.ಎಸ್. ಹೀಗೆ ಅನೇಕ ಸಾಹಿತಿಗಳು ಕಟೀಲು ಪರಿಸರದಲ್ಲಿ ಸಾಹಿತ್ಯ ಕೆಲಸ ಮಾಡಿದವರು ಎಂದು ತೋಳ್ಪಾಡಿ ಹೇಳಿದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article