
ಕಲಿಸಿದ ಶಿಕ್ಷಕರನ್ನು ಮರೆಯಬೇಡಿ: ನಿರೂಪಕಿ ಅನುಶ್ರೀ
ಕಟೀಲು: ಶಾಲೆಯಲ್ಲಿ ಪಾಠ, ನೃತ್ಯ ಹೀಗೆ ನಾನಾ ವಿದ್ಯೆಗಳನ್ನು ಕಲಿಸುವ ಶಿಕ್ಷಕರನ್ನು ಮರೆಯಬಾರದು ಎಂದು ಖ್ಯಾತ ನಿರೂಪಕಿ ಅನುಶ್ರೀ ಹೇಳಿದರು.
ಅವರು ಕಟೀಲು ನುಡಿಹಬ್ಬದಲ್ಲಿ ಸಾಧನೆಯೆಡೆಗೆ ಸಾಗುವ ಬಗೆಯ ಬಗ್ಗೆ ಮಾತನಾಡಿದರು.
ಎಷ್ಟೇ ದೊಡ್ಡ ಹೆಸರು, ಖ್ಯಾತಿ ಪಡೆದರೂ ನಾವು ಬಂದ ಹಾದಿಯನ್ನು ಮರೆಯಬಾರದು. ನಾವು ಗಿಡವಾಗಿ, ಮರವಾಗಿ ಬೆಳೆದು ಇನ್ನೊಬ್ಬರಿಗೆ ನೆರಳಾಗುವ ಕೆಲಸ ಮಾಡಬೇಕು. ಸಾಕಷ್ಟು ಸಮಾಜ ಸೇವೆ, ಸಹಾಯ ಮಾಡುತ್ತಿದ್ದ ಪುನೀತ್ ರಾಜ್‌ಕುಮಾರ್ ತೀರಿಹೋದ ಮೇಲೂ ನಾಲ್ಕು ಮಂದಿಗೆ ಕಾಣುವಂತೆ ಮಾಡಿದವರು ಎಂದ ಅನುಶ್ರೀ, ತಾನು ಚಿಕ್ಕವಳಿದ್ದಾಗ ಬಸ್ಸಿನಲ್ಲಿ ಕಟೀಲಿಗೆ ಬಂದು ಇಲ್ಲಿ ದೇವರನ್ನು ಕಂಡು, ಊಟ ಮಾಡಿ ಹೋಗುತ್ತಿದ್ದ ದಿನಗಳು ನೆನಪಾದವು. ಈಗಲೂ ಮಂಗಳೂರಿಗೆ ಬಂದಾಗ ಕಟೀಲಿಗೆ ಬಂದೇ ಬರುತ್ತೇನೆ. ನಾನು ಅನೇಕ ವೇದಿಕೆಗಳಲ್ಲಿ ಭಾಗವಹಿಸಿದ್ದೇನೆ. ಪ್ರಶಸ್ತಿ ಪಡೆದಿದ್ದೇನೆ. ಆದರೆ ನನ್ನ ಅಮ್ಮನ ಕಟೀಲು ಕ್ಷೇತ್ರದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾಗವಹಿಸಲು ಖುಷಿಯಾಗುತ್ತಿದೆ. ಎಷ್ಟೇ ಸುಸ್ತು ಇದ್ದರೂ ಕಟೀಲಮ್ಮನ ತೀರ್ಥ ಸೇವನೆ ಮಾಡುವಾಗ ಶಕ್ತಿ ಬಂದ ಅನುಭವವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಅನುಶ್ರೀಯವರ ಭಾವಚಿತ್ರ ಬಿಡಿಸಿ ನೀಡಿ, ಅನುಶ್ರೀ ಜೊತೆಗೆ ಹಾಡಿ, ಪ್ರಶ್ನೆಗಳನ್ನು ಕೇಳಿ, ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಕಟೀಲು ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಸೂರಜ್ ಶೆಟ್ಟಿ ಬಜಪೆ, ಡಾ. ಅನಿತ್ ಕುಮಾರ್, ಅರ್ಪಿತಾ ಶೆಟ್ಟಿ ಅತ್ತೂರು ಉಪಸ್ಥಿತರಿದ್ದರು.