
ಕನ್ನಡ ಶಾಲೆಗಳು ಮುಚ್ಚುತ್ತಿವೆ ಆದರೂ ಕನ್ನಡದ ಬೆಳವಣಿಗೆ ಇದೆ: ಅಜಿತ್ ಹನಮಕ್ಕನವರ್
ಕಟೀಲು: ಕನ್ನಡ ಶಾಲೆಗಳು ಮುಚ್ಚುತ್ತಿವೆ. ಮಾತನಾಡುವವರಿಲ್ಲ ಎನ್ನುವ ಆತಂಕದ ನಡುವೆಯೇ ಅತಿ ಹೆಚ್ಚು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಅನೇಕ ಮುದ್ರಣ ಕಾಣುತ್ತಿವೆ ಎನ್ನುವ ಆಶಾದಾಯಕ ಬೆಳವಣಿಗೆಯೂ ಇದೆ ಎಂದು ಪತ್ರಕರ್ತ ಅಜಿತ್ ಹನಮಕ್ಕನವರ್ ಹೇಳಿದರು.
ಅವರು ಕಟೀಲು ನುಡಿಹಬ್ಬದ ಉದ್ಘಾಟನೆ ಸಮಾರಂಭದಲ್ಲಿ ಕಟೀಲು ಪದವಿ ಕಾಲೇಜಿನ ವಿಶೇಷಾಂಕ ಇಂಚರ, ಪದವೀಪೂರ್ವ ಕಾಲೇಜಿನ ಭ್ರಮರವಾಣಿಗಳನ್ನು ಪುಸ್ತಕದ ಕಪಾಟಿನಿಂದ ಆರಿಸಿ, ಬಿಡುಗಡೆಗೊಳಿಸಿ ಮಾತನಾಡಿದರು.
ಬಳಸದೆ ಕನ್ನಡ ಶಬ್ದಗಳು ಮರೆಯಾಗುತ್ತಿವೆ. ಭಾಷೆ ಉಳಿಯುವುದು ಮಾತನಾಡುವವರಿಂದ, ಬರೆಯುವವರಿಂದ, ಅಭಿವ್ಯಕ್ತಿಪಡಿಸುವವರಿಂದ ಹೊರತು ಸರಕಾರದಿಂದ ಅಲ್ಲ. ಹಿಂದಿನಂತೆ ಕನ್ನಡ ನಳನಳಿಸುವಂತೆ ಆಗಬೇಕು ಎಂದರು.
ಯಕ್ಷಗಾನ ಸಪ್ತಸಾಗರ ದಾಟಿ ಮೇಳೈಸುತ್ತಿದೆ. ಮಾತೃಭಾಷೆಯಲ್ಲಿ ಶಿಕ್ಷಣ, ಸಂಭಾಷಣೆ, ಸಂವಹನ ಸುಲಭವಾದಾಗ ಇತರ ಭಾಷೆಗಳಲ್ಲೂ ಚೆನ್ನಾಗಿ ಮಾತಾಡಲು ಸುಲಭವಾಗುತ್ತದೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಅನೇಕ ಸಾಧ್ಯತೆಗಳನ್ನು ಕಲಿಸುವ ಅವಕಾಶ ಇದೆ. ಏಳನೆಯ ತರಗತಿಯಲ್ಲಿ ಕಲಿತ ಬೇಂದ್ರೆಯವರ ಬಗ್ಗೆ ಚೆನ್ನಾಗಿ ನೆನಪಿದೆ. ಆದರೆ ಡಿಗ್ರಿಯಲ್ಲಿ ಕಲಿತದ್ದು ನೆನಪಿಲ್ಲ. ಅಂದರೆ ಮಾತೃಭಾಷೆಯ ಶಿಕ್ಷಣ ಪ್ರಭಾವಶಾಲಿಯಾದುದು. ಭಾಷೆಯ ಬಗ್ಗೆ ಅಭಿಮಾನ ಬೇಕು. ನಿರಭಿಮಾನದ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದರು.
ನುಡಿಹಬ್ಬ ಸಮ್ಮೇಳನವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿ, ಕನ್ನಡ ಶಾಲೆಗಳನ್ನು ನಡೆಸುವುದು ಕಷ್ಟ. ವಿದ್ಯಾರ್ಥಿಗಳಿಗೆ ಅಂಕ ತರುವ, ಶಿಕ್ಷಕರಿಗೆ ಶಾಲೆಗೆ ಮಕ್ಕಳನ್ನು ಕರೆತರುವ ಸಂಖ್ಯೆಯ ಒದ್ದಾಟ ನಡೆಯುತ್ತಿದೆ. ಇಂಗ್ಲಿಷ್ ಕನ್ನಡದ ಚರ್ಚೆಯ ಮಧ್ಯೆ ಶಾಲೆಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
ವಿಸ್ತರಿತ ಶ್ರೀವಿದ್ಯಾ ಸಭಾಭವನದ ಒಳಾಂಗಣ ಕ್ರೀಡಾಂಗಣವನ್ನು ಉದ್ಯಮಿ ಎ.ಜೆ.ಶೆಟ್ಟಿ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಎಂ.ಆರ್.ಪಿ.ಎಲ್ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ ಧ್ವಜಾರೋಹಣ ನೆರವೇರಿಸಿದರು. ಉದ್ಯಮಿ ಕೃಷ್ಣ ಡಿ. ಶೆಟ್ಟಿ ಮೆರವಣಿಗೆಯನ್ನು ಉದ್ಘಾಟಿಸಿದರು.
ಹಿಂದಿನ ನುಡಿಹಬ್ಬದ ಅಧ್ಯಕ್ಷರಾದ ನಾಡೋಜ ಕೆ.ಪಿ. ರಾವ್, ಪಾದೇಕಲ್ಲು ವಿಷ್ಣು ಭಟ್, ಕಟೀಲು ದೇವಳದ ಮೋಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲಿಯಾನ್, ಕಿರಣ್‌ಕುಮಾರ್ ಶೆಟ್ಟಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸರೋಜಿನಿ, ಚಂದ್ರಶೇಖರ ಭಟ್, ರಾಜಶೇಖರ ಎನ್, ಗಿರೀಶ್ ತಂತ್ರಿ, ಕುಸುಮಾವತಿ ಎನ್, ಡಾ ವಿಜಯ್ ವಿ. ಮತ್ತಿತರರು ಉಪಸ್ಥಿತರಿದ್ದರು.
ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು.