
ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ
ಕುಂದಾಪುರ: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸಹಾಯಕವಾಗಲಿದೆ. ಈ ಮೂಲಕ ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆಗಳನ್ನು ಕಾರಂಜಿಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಕುಂದಾಪುರ ವಿಧಾನಸಭಾ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಶುಕ್ರವಾರ ಕೋಟೇಶ್ವರ ಸಮೀಪದ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲ್ ಇವರ ಸಹಯೋಗದೊಂದಿಗೆ ಎಕ್ಸಲೆಂಟ್ ಕ್ಯಾಂಪಸ್ ನಲ್ಲಿ
ನಡೆದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ. ಮಾತನಾಡಿದರು. ಎಮ್.ಎಮ್. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿನಿ ನವಮಿ ಶೆಟ್ಟಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಶೆಟ್ಟಿ, ಉಪಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಎಕ್ಸಲೆಂಟ್ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಗಣೇಶ್ ಕುಮಾರ್ ಶೆಟ್ಟಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ಸ್ವಾಗತಿಸಿದರು. ಶ್ರೀನಿವಾಸ್ ವೈದ್ಯ ಕಾರ್ಯಕ್ರಮ ನಿರೂಪಿಸಿದರು.
ಎಕ್ಸಲೆಂಟ್ ಕಾಲೇಜಿನ ಮುಖ್ಯೋಪಾಧ್ಯಾಯಿನಿ ಸರೋಜಿನಿ ವಂದಿಸಿದರು.