
ಬೀಜಾಡಿ ಬೀಚಿನಲ್ಲಿ ತ್ಯಾಜ್ಯ ಎಸೆತ: ರೋಚ್ಚಿಗೆದ್ದ ನಾಗರಿಕರು
ಕುಂದಾಪುರ: ಉಡುಪಿ ಜಿಲ್ಲೆಯ ಕರಾವಳಿ ಅತ್ಯಂತ ಸುಂದರ ಕಡಲ ಕಿನಾರೆ, ಉತ್ತಮ ವಾತಾವರ್ಣ ಹೊಂದಿದ್ದು, ಅನ್ಯ ಸ್ಥಳಗಳ ಪ್ರವಾಸಿಗರನ್ನು ಬಹಳವಾಗಿ ಆಕರ್ಷಿಸುತ್ತಿದೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಇಲ್ಲಿನ ಹಲವರು ಈ ಪರಿಸರದಲ್ಲಿ ಹಲವಾರು ಬೀಚ್ ರೆಸಾರ್ಟ್, ಹೋಮ್ ಸ್ಟೇ, ಪಿಕ್ನಿಕ್ ಸ್ಪಾಟ್ ಗಳನ್ನು ನಿರ್ಮಿಸಿ, ಪ್ರವಾಸಿಗರನ್ನು ಸೆಳೆಯುತ್ತಿದ್ದಾರೆ. ಕುಂದಾಪುರ ತಾಲೂಕು ಬೀಜಾಡಿ ಈ ರೀತಿಯ ಸುಂದರ ಕಡಲ ಕಿನಾರೆಯನ್ನು ಹೊಂದಿರುವ ಒಂದು ಪುಟ್ಟ ಗ್ರಾಮ. ಇಲ್ಲಿನ ಸುಂದರ, ಸ್ವಚ್ಚ ಕಡಲ ತಡಿ ಪ್ರವಾಸಿಗರು, ಹಾಗೆಯೇ ಅವರನ್ನು ಆದರಿಸುವ ಉದ್ಯಮಿಗಳನ್ನು ಬಹುವಾಗಿ ಆಕರ್ಷಿಸುತ್ತಿದೆ. ಆದ್ದರಿಂದಲೇ ಈ ಗ್ರಾಮದ ಕಡಲಂಚಿನಲ್ಲಿ ಹಲವಾರು ರೆಸಾರ್ಟ್ ಗಳು, ಹೋಮ್ ಸ್ಟೇ ಗಳು ಪ್ರಾರಂಭಗೊಂಡಿವೆ. ಪ್ರವಾಸೋದ್ಯಮವನ್ನು ಉತ್ತೇಜಸುವ ಈ ರೀತಿಯ ಉದ್ಯಮಗಳು ಯಾವುದೇ ಊರಿಗೆ ಒಳ್ಳೆಯದೇ. ಇದು ಪ್ರತ್ಯಕ್ಷ - ಪರೋಕ್ಷ ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತದೆ. ಆದರೆ, ಬೀಜಾಡಿಯ ವಿಶೇಷತೆಯೆಂದರೆ ಇಲ್ಲಿ ಪ್ರವಾಸೋದ್ಯಮ ಸ್ಥಳೀಯ ನಿವಾಸಿಗಳ ನೆಮ್ಮದಿ ಕಸಿದು, ಸುಂದರ ಪ್ರಕೃತಿಯನ್ನು ಹಾಳುಗೆಡವುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಸೋಮವಾರ ಬೀಜಾಡಿ ಕಡಲ ಕಿನಾರೆಯಲ್ಲಿನ ಘಟನೆ. ಸಾಲು ರಜೆಯ ಪರಿಣಾಮ ಇಲ್ಲಿನ ಎಲ್ಲ ರೆಸಾರ್ಟ್, ಹೋಮ್ ಸ್ಟೇಗಳೂ ಭರ್ತಿಯಾಗಿದ್ದವು. ಸಾಲದೆಂಬಂತೆ ಇಲ್ಲಿನ ಖಾಲಿ ನಿವೇಶನದಲ್ಲೂ ಪಾರ್ಟಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಸಮುದ್ರ ದಡದಲ್ಲಿ ಮಾಂಸದ ತುಂಡುಗಳು, ಮೂಳೆ ಹಾಗೂ ಅನ್ನದ ರಾಶಿ ಅಲ್ಲಲ್ಲಿ ಬಿದ್ದಿತ್ತು! ರಾತ್ರಿ ನಡೆಸಿದ ಸಮಾರಂಭದಲ್ಲಿನ ತ್ಯಾಜ್ಯಗಳನ್ನು ಜಾಗದ ಮಾಲೀಕರು ಸಮುದ್ರಕ್ಕೆ ಎಸೆದಿದ್ದರು. ಇದು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಎಲ್ಲೆಲ್ಲಿಂದಲೋ ಬರುವ ಪ್ರವಾಸಿಗರಿಗಾಗಿ ಇಲ್ಲಿ ಪಾರ್ಟಿ, ಮೋಜು - ಮಸ್ತಿ ಏರ್ಪಡಿಸಿ, ಅವರಿಂದ ಸಾಕಷ್ಟು ಹಣ ಪಡೆದ ನಂತರವೂ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡದೇ ಸಮುದ್ರಕ್ಕೆ ಎಸೆದವರ ಬಗ್ಗೆ ಜನರು ರೊಚ್ಚಿಗೆದ್ದರು. ಈ ಪ್ರದೇಶದಲ್ಲಿ ಜಮಾಯಿಸಿದ ಜನ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕರೆಸಿ ವಿಷಯ ತಿಳಿಸಿದರು. ಅವರು ಸಂಬಂಧಿತ ಜಾಗದ ಮಾಲಕರನ್ನು ಕರೆಸಿ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಮಾಲಕರು ಆಚಾತುರ್ಯಕ್ಕಾಗಿ ಕ್ಷಮೆ ಯಾಚಿಸಿ, ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸ್ಥಳದಲ್ಲಿದ್ದ ಮಾಧ್ಯಮದವರೊಂದಿಗೆ ಸ್ಥಳೀಯ ನಿವಾಸಿಗಳು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಈ ಪರಿಸರದಲ್ಲಿ ಸಾರ್ವಜನಿಕರು ಸಾವಿರಾರು ರೂ. ವ್ಯಯಿಸಿ, ಪಾರ್ಕ್ ಗಳು, ಬೆಂಚುಗಳನ್ನು ನಿರ್ಮಿಸಿ, ಕಡಲ ವೀಕ್ಷಣೆಗೆ ಬರುವವರಿಗೆ ಅನುಕೂಲಗಳನ್ನು ಕಲ್ಪಿಸಿದ್ದರು. ಆದರೆ, ಇಲ್ಲಿನ ರೆಸಾರ್ಟ್ ಗಳು, ಸ್ಥಳಗಳಲ್ಲಿನ ಸಮಾರಂಭಗಳಿಗೆ ಆಗಮಿಸುವವರು ಸ್ವೇಚ್ಛೆಯಾಗಿ ವರ್ತಿಸಿ, ಪರಿಸರ ಹಾಳುಗೆಡವುತ್ತಿದ್ದಾರೆ. ಸ್ಥಳೀಯರು, ಸಂಘ ಸಂಸ್ಥೆಗಳವರು ಸ್ವಚ್ಚ ಮಾಡಿದಷ್ಟೂ ಕಸ, ನೀರು-ಬೀರಿನ ಬಾಟಲಿಗಳು, ಪ್ಲಾಸ್ಟಿಕ್, ಆಹಾರ ತ್ಯಾಜ್ಯ, ಮಾಂಸ, ಮೂಳೆಗಳು ಸಿಗುತ್ತಿವೆ. ಮಾತ್ರವಲ್ಲ, ರೆಸಾರ್ಟ್, ಸಮಾರಂಭಗಳಿಗೆ ಬರುವವರು ಇಲ್ಲಿನ ಕಿರಿದಾದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಅಬ್ಬರದ ಸಂಗೀತಗಳೂ ಕೇಳಿಬರುತ್ತಿವೆ.
ರೆಸಾರ್ಟ್ ಗಳಿಗೆ ನಿಗದಿಯಾದ ಪಾರ್ಕಿಂಗ್ ಏರಿಯಾದಲ್ಲೇ ವಾಹನ ನಿಲ್ಲಿಸಬೇಕು. ಕಡಲ ತಡಿಯಲ್ಲಿ ಕುಳಿತು ಪಾರ್ಟಿ ಮಾಡಬಾರದು, ಅಬ್ಬರದ ಸಂಗೀತ, ಗಲಾಟೆ ನಡೆಸಕೂಡದು, ಪರಿಸರ ಹಾಳು ಮಾಡಬಾರದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಮುಂದೆಯೂ ಈ ಅಕೃತ್ಯಗಳು ನಡೆದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.
ಇಲ್ಲಿನ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರು ಕಡಲ ಅಂಚಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವ ವಿಡಿಯೋ ಮಾಧ್ಯಮದವರಲ್ಲಿದೆ. ವಾಸ್ತವವಾಗಿ ಬೀಜಾಡಿ ಪರಿಸರದ ಕೆಲವು ಬೀಚ್ ಉದ್ಯಮಗಳಿಗೆ ಸರಿಯಾದ ಅನುಮತಿಯೇ ಇಲ್ಲ. ಈ ಎಲ್ಲ ಅಂಶಗಳೂ ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಪ್ರವಾಸೋದ್ಯಮ ಇಲಾಖೆಯವರಿಗೆ ತಿಳಿಯದ್ದೆನೂ ಅಲ್ಲ. ಜಿಲ್ಲಾಧಿಕಾರಿಗಳು ಆಗಾಗ ಎಚ್ಚರಿಕೆಯನ್ನು ನೀಡುವುದು ಬಿಟ್ಟರೆ ಬೇರೇನೂ ಕ್ರಮವಿಲ್ಲ. ಇದೆಲ್ಲವೂ ಉದ್ಯಮಿಗಳಿಗೆ ವರವಾಗಿ ಪರಿಣಮಿಸಿ, ಸ್ಥಳೀಯ ನಿವಾಸಿಗಳಿಗೆ ಶಾಪವಾಗಿದೆ. ಒಟ್ಟಿನಲ್ಲಿ ಸುಂದರ ಕಡಲ ಕಿನಾರೆ ತನ್ನ ನಿಜ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ.