
ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಮಟ್ಟದ ಕ್ರಾಸ್‌ಕಂಟ್ರಿ
ಜನತೆಯ ಸಹಕಾರ ಯಶಸ್ಸಿಗೆ ಕಾರಣ: ಪಿ.ಎಲ್. ಧರ್ಮ
ಉಪ್ಪಿನಂಗಡಿ: ತೀರಾ ಗ್ರಾಮೀಣ ಪ್ರದೇಶವಾಗಿರುವ ಉಪ್ಪಿನಂಗಡಿಯಲ್ಲಿ, ಅದರಲ್ಲೂ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟವೊಂದು ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ವಿಚಾರವಾಗಿದ್ದು, ಎಲ್ಲರೂ ಒಂದಾಗಿ ಕೈಜೋಡಿಸಿದರೆ ಏನನ್ನೂ ಮಾಡಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪಿ.ಎಲ್. ಧರ್ಮ ಹೇಳಿದರು.
ಅವರು ಮಂಗಳವಾರ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಂತರ್ ವಿ.ವಿ. ಕ್ರಾಸ್‌ಕಂಟ್ರಿ ಚಾಂಪಿಯನ್ ಶಿಫ್-2024ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿಧಾನ ಸಭಾ ಸ್ಫೀಕರ್ ಯು.ಟಿ. ಖಾದರ್ ಕ್ರಾಸ್‌ಕಂಟ್ರಿ ಚಾಂಪಿಯನ್ ಶಿಫ್‌ಗೆ ಚಾಲನೆ ನೀಡಿದರು.
ಪುತ್ತೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಜುಬಿನ್ ಮಹೋಪಾತ್ರ ಮಾತನಾಡಿ, ಗ್ರಾಮೀಣ ಪ್ರದೇಶವಾಗಿರುವ ಉಪ್ಪಿನಂಗಡಿಯಂತಹ ಗ್ರಾಮದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟ ನಡೆದಿರುವುದು ಐತಿಹಾಸಿಕ ದಾಖಲೆಯಾಗಿದೆ. ಇದಕ್ಕೆ ಬಹಳಷ್ಟು ಶ್ರಮ ಪಡಬೇಕಾಗುತ್ತದೆ, ಇಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಪರಸ್ಪರ ಒಂದಾಗಿ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಮಂತ ಸಂಸ್ಕೃತಿ ಇದ್ದು, ಇಲ್ಲಿನ ನೆಲದ ಮಹಿಮೆಯೇ ಈ ರೀತಿಯ ಸಾಧನೆಯನ್ನು ಯಶಸ್ವಿಗೊಳಿಸುತ್ತದೆ ಎಂದರು.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ‍್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಕ್ರೀಡಾಕೂಟ ಸಮಿತಿಯ ಡಾ. ರಾಜಾರಾಮ್ ಮಾತನಾಡಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತ, ಮಂಗಳೂರು ವಿಶ್ವವಿದ್ಯಾನಿಲಯದ ಉಪ ನಿರ್ದೇಶಕ ಪ್ರದೀಪ್ ಡಿ’ಸೋಜಾ, ಕಿಶೋರ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಎ. ಕೃಷ್ಣರಾವ್ ಅರ್ತಿಲ, ಅಶ್ರಫ್ ಬಸ್ತಿಕ್ಕಾರ್, ವಿನ್ಸೆಂಟ್ ಫೆರ್ನಾಂಡಿಸ್, ಮಹಬಲೇಶ್ವರ ಭಟ್, ಇಸ್ಮಾಯಿಲ್ ಇಕ್ಬಾಲ್, ಯು.ಟಿ. ತೌಸೀಫ್, ಶಬ್ಬೀರ್ ಕೆಂಪಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿ’ಸೋಜಾ ಸ್ವಾಗತಿಸಿ, ಉಪ್ಪಿನಂಗಡಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಕ್ರೀಡಾಜ್ಯೋತಿ ತರಲಾಯಿತು.
ಕ್ರಾಂಸ್ ಕಂಟ್ರಿ ಹೀಗಿತ್ತು..:
ಕಾಲೇಜಿನಿಂದ ಹೊರಟ ಕ್ರೀಡಾಪಟುಗಳು ಹೆದ್ದಾರಿಯಲ್ಲಿ ಬಲಕ್ಕೆ ತಿರುಗಿ ಗಾಂಧಿಪಾರ್ಕ್ ಮೂಲಕ ಬಸ್ ನಿಲ್ದಾಣದಲ್ಲಿ ತಿರುವು ಪಡೆದು, ಬೈಪಾಸ್ ಮೂಲಕ ಮತ್ತೆ ಹೆದ್ದಾರಿ ಪ್ರವೇಶಿಸಿ ಉಪ್ಪಿನಂಗಡಿ-ಹಿರೇಬಂಡಾಡಿ-ಕೊಯಿಲ ಸಂಪರ್ಕ ರಸ್ತೆಯಲ್ಲಿ ಸಾಗಿತು. ಹಿರೇಬಂಡಾಡಿಯಲ್ಲಿ ನ್ಯಾಯ ಬೆಲೆ ಅಂಗಡಿ ಎದುರುಗಡೆ ತಿರುವು ಪಡೆದುಕೊಂಡು ಅದೇ ರಸ್ತೆಯಾಗಿ ಸಾಗಿ ಹೆದ್ದಾರಿಯನ್ನು ದಾಟಿ ಕಾಲೇಜು ಮೈದಾನದಲ್ಲಿ ೧೦ ಕಿಲೋ ಮೀಟರ್ ಓಟವನ್ನು ಕೊನೆಗೊಳಿಸಲಾಯಿತು.
ರಸ್ತೆಯ ಉದ್ದಕ್ಕೂ ಗ್ರಾಮದ ಮಂದಿ ಕಾತರದಿಂದ ಕಾಯುತ್ತಿದ್ದುದು ಕಂಡು ಬಂತು. ಕ್ರೀಡಾಕೂಟ ಸಮಿತಿ ವತಿಯಿಂದ ಅಲ್ಲಲ್ಲಿ ನೀರಿನ ಬಾಟಲಿ ವ್ಯವಸ್ಥೆ, ಸ್ಪಾಂಜ್ ವ್ಯವಸ್ಥೆ ಮಾಡಲಾಗಿತ್ತು. ಉಪ್ಪಿನಂಗಡಿಯಿಂದ ಹಿರೇಬಂಡಾಡಿ ತನಕವೂ ಅಲ್ಲಲ್ಲಿ ಇರುವ ತಿರುವು ರಸ್ತೆ ಬಳಿಯಲ್ಲಿ ರಸ್ತೆಗೆ ವಾಹನ, ಪ್ರಾಣಿಗಳು ಪ್ರವೇಶ ಪಡೆಯದಂತೆ ಸ್ವಯಂ ಸೇವಕರು ಮತ್ತು ಪೊಲೀಸರು ಕರ್ತವ್ಯ ನಿರತರಾಗಿದ್ದರು.