
ನ.10ರಂದು ‘ನಿವೇಯಸ್ ಮಂಗಳೂರು ಮ್ಯಾರಥಾನ್-2024’
ಮಂಗಳೂರು: ಮಂಗಳೂರು ರನ್ನರ್ಸ್ ಕ್ಲಬ್ ಆಶ್ರಯದಲ್ಲಿ ‘ನಿವೇಯಸ್ ಮಂಗಳೂರು ಮ್ಯಾರಥಾನ್-2024’ ನ.10 ರಂದು ನಡೆಯಲಿದ್ದು, ಸುಮಾರು ಐದು ಸಾವಿರ ಮಂದಿ ಮಂಗಳೂರು ನಗರದಲ್ಲಿ ಮ್ಯಾರಥಾನ್ ನಡೆಸಲಿದ್ದಾರೆ.
ಅಂತಾರಾಷ್ಟ್ರೀಯ ಮಾನದಂಡಗಳ ಮೇಲೆ ಈ ಮ್ಯಾರಥಾನ್ ನಡೆಯಲಿದ್ದು, 8 ರಿಂದ 80 ವರ್ಷದ ವಿವಿಧ ವಯೋಮಾನದವರು ಭಾಗವಹಿಸಲಿದ್ದಾರೆ. ಭಾರತದ 18 ರಾಜ್ಯಗಳಲ್ಲದೆ, ಜಪಾನ್, ಇಥಿಯೋಪಿಯಾ, ಕೀನ್ಯಾ, ಸ್ವಿಟ್ಜರ್‌ಲ್ಯಾಂಡ್ ಮತ್ತು ಸ್ಪೇನ್ನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮ್ಯಾರಥಾನ್ ನಿರ್ದೇಶಕ ಅಭಿಲಾಷ್ ಡೊಮಿನಿಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳಾ ಸ್ಟೇಡಿಯಂನಿಂದ ಆರಂಭಗೊಂಡು ತಣ್ಣೀರುಬಾವಿ ವರೆಗೆ ಮ್ಯಾರಥಾನ್ ಸಾಗಲಿದೆ. ನಸುಕಿನ 4 ಗಂಟೆಗೆ ಮ್ಯಾರಥಾನ್ ಆರಂಭವಾಗಲಿದ್ದು, 8 ಗಂಟೆಗೆ ಮುಕ್ತಾಯವಾಗಲಿದೆ. ಮ್ಯಾರಥಾನ್ ಸಲುವಾಗಿ ಸಂಚಾರ ವ್ಯವಸ್ಥೆಯಲ್ಲೂ ಮಾರ್ಪಾಟುಗೊಳಿಸಲಾಗಿದೆ ಎಂದರು.
ಪೂರ್ಣ ಮ್ಯಾರಥಾನ್ (42.195 ಕಿ.ಮೀ), 20 ಮೈಲರ್, ಹಾಫ್ ಮ್ಯಾರಥಾನ್ (21.097 ಕಿ.ಮೀ), 10 ಕಿ.ಮೀ, 5 ಕಿಮೀ, 2 ಕೆ ಗಮ್ಮತ್ ಓಟ ಮತ್ತು ವಿದ್ಯಾರ್ಥಿ ಓಟ. 10ಕೆ ವರ್ಗದಲ್ಲಿ ಭಾಗವಹಿಸುವವರಿಗೆ ತಣ್ಣೀರುಬಾವಿ ಜೆಟ್ಟಿಯಿಂದ ಮಂಗಳಾ ಸ್ಟೇಡಿಯಂಗೆ ಉಚಿತ ದೋಣಿ ಸಂಚಾರ ವ್ಯವಸ್ಥೆಗೊಳಿಸಲಾಗಿದೆ. ಮ್ಯಾರಥಾನ್ನಲ್ಲಿ ಭಾಗವಹಿಸುವವರಿಗೆ 12 ಲಕ್ಷ ರೂ.ಗಳ ಬಹುಮಾನವನ್ನು ವಿವಿಧ ವಿಭಾಗಗಳಿಗೆ ನೀಡಲಾಗುವುದು. ಪೂರ್ಣ ಮ್ಯಾರಥಾನ್ ವಿಜೇತರಿಗೆ 35 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.
ನಿರ್ದೇಶಕರಾದ ರಮೇಶ್ ಬಾಬು, ಅಭಿಷೇಕ್ ಹೆಗ್ಡೆ ಉಪಸ್ಥಿತರಿದ್ದರು.