ಜ.15-19: 5 ದಿನಗಳ ಕಾಲ ಮಂಗಳೂರಿನಲ್ಲಿ ಮೂರನೇ ವರ್ಷದ ‘ಸ್ಟ್ರೀಟ್ ಫುಡ್ ಫಿಯೇಸ್ಟಾ’

ಜ.15-19: 5 ದಿನಗಳ ಕಾಲ ಮಂಗಳೂರಿನಲ್ಲಿ ಮೂರನೇ ವರ್ಷದ ‘ಸ್ಟ್ರೀಟ್ ಫುಡ್ ಫಿಯೇಸ್ಟಾ’


ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜರುಗುವ ಮೂರನೇ ವರ್ಷದ ಸ್ಟ್ರೀಟ್ ಫುಡ್ ಫಿಯೇಸ್ಟಾ ಜನವರಿ 15 ರಿಂದ 19 ರವರೆಗೆ 5 ದಿನಗಳ ಕಾಲ ನಡೆಯಲಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ಅವರು ಇಂದು ನಗರದ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಇದರ ದಿನಾಂಕ ಮತ್ತು ಸ್ಥಳವನ್ನು ಘೋಷಿಸಿದರು.

‘ಮೂರನೇ ವರ್ಷದ ಸ್ಟ್ರೀಟ್ ಫುಡ್ ಕಾರ್ಯಕ್ರಮದ ದಿನಾಂಕ ಘೋಷಣೆ ಮಾಡಲು ಇಲ್ಲಿರುವ ದೇವರ ಮಕ್ಕಳ ಎದುರು ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗಿನಿಂದ ಮಕ್ಕಳಿಗೆ ವಿಶೇಷ ಆಹಾರ, ಆಟವಾಡಲು ವ್ಯವಸ್ಥೆ ಕಲ್ಪಿಸಿ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದೇವೆ. 5 ದಿನಗಳ ಕಾಲ ಸ್ಟ್ರೀಟ್ ಫುಡ್ ಫಿಯೇಸ್ಟಾ ಜರುಗಲಿದೆ. ಕಳೆದ ಬಾರಿಯಂತೆ ನಾರಾಯಣಗುರು ಸರ್ಕಲ್, ಪಬ್ಬಾಸ್ ಐಸ್ ಕ್ರೀಮ್, ಹಿಂದಿ ಪ್ರಚಾರ ಸಮಿತಿ ಸುತ್ತಮುತ್ತಲಿನ ಮಾರ್ಗ ಹಾಗೂ ಕರಾವಳಿ ಉತ್ಸವ ಮೈದಾನದಲ್ಲಿ ಆಹಾರಮೇಳ ಆಯೋಜಿಸಲಾಗಿದೆ. ಇದರ ಜೊತೆಗೆ ಮಕ್ಕಳಿಗೆ ವಿಶೇಷ ಪ್ಲೇ ಏರಿಯಾ, ಮನೋರಂಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರ್ಕೆಸ್ಟ್ರಾ, ಹುಟ್ಟುಹಬ್ಬದ ಆಚರಣೆ, ಸೆಲ್ಫಿ ಜೋನ್ ಸಹಿತ ವಿವಿಧ ಕಾರ್ಯಕ್ರಮಗಳನ್ನು ಸ್ಥಳದಲ್ಲಿ ಆಯೋಜಿಸಲಾಗಿದೆ ಎಂದರು.

ಪ್ರತಿನಿತ್ಯ ಸಂಜೆ 4 ಗಂಟೆಯಿಂದ ರಾತ್ರಿ 10.30ರ ವರೆಗೆ ನಡೆಯಲಿದೆ. ಪ್ರಾರಂಭ ಮತ್ತು ಅಂತ್ಯದ ದಿನಗಳಲ್ಲಿ ಮಧ್ಯಾಹ್ನ ಸ್ವಲ್ಪ ಬೇಗನೆ ಪ್ರಾರಂಭಿಸಿ ರಾತ್ರಿ 11 ಗಂಟೆಯವರೆಗೆ ಏರ್ಪಡಿಸಲಾಗಿದೆ. 250ಕ್ಕೂ ಹೆಚ್ಚು ಫುಡ್ ಸ್ಟಾಲ್‌ಗಳಲ್ಲಿ ಕರಾವಳಿಯ ವಿಶೇಷ ತಿನಿಸುಗಳು ಮಾತ್ರವಲ್ಲದೆ ಬೇರೆ ಕಡೆಯ ಆಹಾರವನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ. ವೆಜ್ ಮತ್ತು ನಾನ್ ವೆಜ್ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇದೆ. ಅಂಗಡಿಗಳನ್ನು ಹಾಕಲು ನೆಲ ಬಾಡಿಗೆ ವ್ಯವಸ್ಥೆ ಹೊರತುಪಡಿಸಿ ಕಳೆದ ಬಾರಿಯಂತೆ ಪ್ರಾಫಿಟ್ ಶೇರಿಂಗ್ ವ್ಯವಸ್ಥೆಯಿಲ್ಲ ಎಂದು ಹೇಳಿದರು.

ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ಮಂಗಳೂರಿನಲ್ಲಿ ಹಿಂದಿನ ಎರಡು ಫುಡ್ ಫೆಸ್ಟಿವಲ್ ಯಶಸ್ವಿಯಾಗಿದ್ದು ಇದರಿಂದ ರಾಜ್ಯದೆಲ್ಲೆಡೆ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇಂತಹ ಜನಮನ್ನಣೆ ಪಡೆದಿರುವ ಕಾರ್ಯಕ್ರಮ ಮಂಗಳೂರಿನಲ್ಲಿ ಆಯೋಜನೆಯಾಗುತ್ತಿರುವುದು ಖುಷಿಯ ವಿಚಾರ. ಕಾರ್ಯಕ್ರಮದ ಮುಹೂರ್ತ ಇಂದು ಚೇತನಾ ವಿಶೇಷ ಶಾಲೆಯಲ್ಲಿ ನಡೆದಿದ್ದು ಮತ್ತೊಮ್ಮೆ ಜನರ ಪ್ರೀತಿಯನ್ನು ಪಡೆಯಲಿ. ಮಂಗಳೂರಿನ ವಿಶೇಷ ಆಹಾರ ಖಾದ್ಯಗಳು ಇಂದು ಎಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದ್ದು ಹೊರಗಿನಿಂದ ಬಂದವರಿಗೆ ಇಲ್ಲಿನ ಸಂಸ್ಕೃತಿ ಸೊಗಡು ಪರಿಚಯಗೊಳ್ಳಲಿ’ ಎಂದು ಹೇಳಿದರು.

ಸಂಘಟನೆಯ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ್ ಉಪಸ್ಥಿತರಿದ್ದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article