ನ.17 ರಂದು ಧಾರವಾಡದಲ್ಲಿ ಪಂ. ವಸಂತ ಕನಕಾಪುರ್ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ

ನ.17 ರಂದು ಧಾರವಾಡದಲ್ಲಿ ಪಂ. ವಸಂತ ಕನಕಾಪುರ್ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ

ಮಂಗಳೂರು: ಪಂ. ವಸಂತ ಕನಕಾಪುರ್ ಧಾರವಾಡ ಇವರ ಸ್ಮರಣಾರ್ಥ ನಾಡಿನಾದ್ಯಂತ ಇರುವ ಅವರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗವು ಧಾರವಾಡದ ಸೃಜನಾ ರಂಗ ಮಂದಿರದಲ್ಲಿ ನ.17 ರಂದು ಸಂಜೆ 5.30ರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಸಂದರ್ಭದಲ್ಲಿ ವಸಂತ ಕನಕಾಪುರ್ ಅವರ ಪತ್ನಿ, ಗುರುಮಾತೆ ಬನೂತಾಯಿ ಕನಕಾಪುರ್ ಅವರಿಗೆ ಗೌರವಾರ್ಪಣೆ ಸನ್ಮಾನವನ್ನು ಶಿಷ್ಯ ವೃಂದ ನಡೆಸಿಕೊಡಲಿದೆ.

ಪಂ. ವಸಂತ ಕನಕಾಪುರ್ ಅವರು ನಾಡು ಕಂಡು ಶ್ರೇಷ್ಠ ಹಾರ್ಮೋನಿಯಂ ಕಲಾವಿದರಾಗಿದ್ದಾರೆ. ದೇಶದ ಸಂಗೀತ ದಿಗ್ಗಜರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಮಾತ್ರವಲ್ಲದೆ, ಸೋಲೋ ವಾದಕರಾಗಿ ದೇಶ ವಿದೇಶಗಳ ಪ್ರಮುಖ ಸಂಗೀತ ವೇದಿಕೆಗಳಲ್ಲಿ ನುಡಿಸಿದ್ದಾರೆ. ಮಾತ್ರವಲ್ಲದೆ ನಾಡಿನಾದ್ಯಂತ ಶಿಷ್ಯರನ್ನು ಹೊಂದಿದ್ದಾರೆ. ಅಂತಹ ನಾಡಿನಾದ್ಯಂತ ಇರುವ ಶಿಷ್ಯರು ಪಂ. ವಸಂತ ಕನಕಾಪುರ್ ಸ್ಮರಣಾರ್ಥ ಸಂಗೀತ ಕಾರ್ಯಕ್ರಮದ ಮೂಲಕ ಸಂಸ್ಮರಣೆಯನ್ನು ಆಯೋಜಿಸಿದ್ದಾರೆ.

ಈ ಸಂಗೀತ ಸಂಜೆಯ ಪ್ರಾರಂಭದಲ್ಲಿ ಬೆಂಗಳೂರಿನ ಖ್ಯಾತ ಗಾಯಕಿ ವಿದೂಷಿ ಪೂರ್ಣಿಮಾ ಕುಲಕರ್ಣಿ ಗಾಯನ ನಡೆಸಿಕೊಡಲಿದ್ದಾರೆ. ನಂತರ ನಮ್ಮ ದೇಶದ ಪ್ರಖ್ಯಾತ ಹಾರ್ಮೋನಿಯಂ ವಾದಕ ಹಾಗೂ ಗಾಯಕರಾದ ಬೆಂಗಳೂರಿನ ಪಂ. ವ್ಯಾಸಮೂರ್ತಿ ಕಟ್ಟಿ ಅವರು ಹಾರ್ಮೊನಿಯಂ ಸೋಲೋವನ್ನು ನಡೆಸಿಕೊಡಲಿದ್ದಾರೆ. ಬಳಿಕ ಕಿರಾಣಾ ಘರಾನಾದ ಮುಂಚೂಣಿ ಗಾಯಕ ಹುಬ್ಬಳ್ಳಿಯ ಪಂ. ಜಯತೀರ್ಥ ಮೇವುಂಡಿ ಅವರ ಹಿಂದೂಸ್ತಾನಿ ಗಾಯನ ನಡೆಯಲಿದೆ. ಹಾರ್ಮೋನಿಯಂನಲ್ಲಿ ಸಿರ್ಸಿಯ ವಿದ್ವಾನ್ ಪ್ರಕಾಶ್ ಹೆಗಡೆ, ಮಂಗಳೂರಿನ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಸಾಥ್ ನೀಡಲಿದ್ದಾರೆ. ತಬ್ಲಾದಲ್ಲಿ ಬೆಂಗಳೂರಿನ ಗುರುಮೂರ್ತಿ ವೈದ್ಯ ಹಾಗೂ ಧಾರವಾಡದ ಶ್ರೀಧರ್ ಮಾಂಡ್ರೆ ಅವರು ಸಹಕರಿಸಲಿದ್ದಾರೆ.

ಕಾರ್ಯಕ್ರಮವನ್ನು ಧಾರವಾಡದ ಖ್ಯಾತ ನಿರೂಪಕಿ ಮಾಯಾ ರಾಮನ್ ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶ ಇದ್ದು, ಸಂಗೀತಾಸಕ್ತರು, ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article