ನ.30ರಿಂದ ಹಳೆ ಡಿಸಿ ಕಚೇರಿ ಕಟ್ಟಡದಲ್ಲಿ ಪಾರಂಪರಿಕ ಸಪ್ತಾಹ

ನ.30ರಿಂದ ಹಳೆ ಡಿಸಿ ಕಚೇರಿ ಕಟ್ಟಡದಲ್ಲಿ ಪಾರಂಪರಿಕ ಸಪ್ತಾಹ


ಮಂಗಳೂರು: ಹಲವಾರು ವರ್ಷಗಳ ಇತಿಹಾಸವುಳ್ಳ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದ ಆವರಣದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಬ್ರಿಟೀಷರ ಕಾಲದಲ್ಲಿ ಕಲೆಕ್ಟರ್ ಆಫೀಸ್ ಎಂದೇ ಕರೆಯಲ್ಪಡುತ್ತಿದ್ದ ಈ ಕಟ್ಟಡವು ಒಂದು ಕಾಲದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಹಿಂದಿನ ಕೆನರಾ ಜಿಲ್ಲೆಯ ಆಡಳಿತ ಕೇಂದ್ರಸ್ಥಾನವಾಗಿತ್ತು. ಸ್ವಾತಂತ್ರ್ಯಾಪೂರ್ವದಲ್ಲಿ ಬ್ರಿಟೀಷ್ ಅಧಿಕಾರಿಗಳಿಗೆ ಇದು ಕಚೇರಿಯಾಗಿತ್ತು. ನಂತರವೂ ಜಿಲ್ಲಾಧಿಕಾರಿ ಕಚೇರಿ ಇಲ್ಲಿಯೇ ಕಾರ್ಯಾಚರಿಸುತ್ತಿತ್ತು.

ಬಳಿಕ ಪಕ್ಕದಲ್ಲಿಯೇ ಹೊಸ ಕಟ್ಟಡವಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಲ್ಲಿಗೆ ಸ್ಥಳಾಂತರಗೊಂಡಿದ್ದರೂ, ಹಳೇ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಇಂದಿಗೂ ಗಟ್ಟಿಮುಟ್ಟಾಗಿ ಸುಭದ್ರ ಸ್ಥಿತಿಯಲ್ಲಿರುವ ಈ ಕಟ್ಟಡವು ಜಿಲ್ಲೆಯ ಆಡಳಿತ ಕ್ಷೇತ್ರದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.

ಈ ಕಟ್ಟಡದ  ಪಾರಂಪರಿಕ ಮತ್ತು ಭವ್ಯ ಇತಿಹಾಸವನ್ನು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಸ್ಥಳದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನ.30 ರಂದು ಬೆಳಿಗ್ಗೆ 10 ರಿಂದ ಸರಕಾರಿ ಶಾಲೆಗಳ 3 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದೇ ಪಾರಂಪರಿಕ ಸ್ಮಾರಕಗಳನ್ನು ಈ ಸ್ಪರ್ಧೆಯಲ್ಲಿ ಬಿಡಿಸಬಹುದಾಗಿದೆ. ಅಂದು ಮಧ್ಯಾಹ್ನ 2 ರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಳೇ ಜಿಲ್ಲಾಧಿಕಾರಿ ಕಟ್ಟಡದ ಒಳ ಮತ್ತು ಹೊರ ಭಾಗದ ಆವರಣದ ಬಗ್ಗೆ ತಮ್ಮ ದೃಷ್ಟಿಕೋನದ ಕಲಾವಿನ್ಯಾಸ ಸ್ಪರ್ಧೆ ನಡೆಯಲಿದೆ. ಈ ಕಟ್ಟಡವನ್ನು ಇನ್ನಷ್ಟು ಆಕರ್ಷಿಸಲು ನವೀನ ವಿನ್ಯಾಸವನ್ನು ಸ್ಪರ್ಧಾಳುಗಳು ತಮ್ಮ ಕಲೆಯಲ್ಲಿ ಪ್ರದರ್ಶಿಸಬಹುದಾಗಿದೆ.

ಬೆಳಿಗ್ಗೆ 11 ರಿಂದ 12 ಹಾಗೂ ಮಧ್ಯಾಹ್ನ 3 ರಿಂದ 4ರ ವರೆಗೆ ಪಾರಂಪರಿಕ ನಡಿಗೆ, ಸಂಜೆ 4.30 ರಿಂದ ಮುಕ್ತ ಸಂವಾದ ನಂತರ ಬಹುಮಾನ ವಿತರಣೆ, ಸಂಜೆ 6 ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಪಾರಂಪರಿಕ ವಸ್ತು ಪ್ರದರ್ಶನ ನಡೆಯಲಿದೆ.

ಮುಂದಿನ ದಿನಗಳಲ್ಲಿ ಈ ಪಾರಂಪರಿಕ ಕಟ್ಟಡದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು, ಪ್ರವಾಸೋದ್ಯಮ ಆಕರ್ಷಿಸುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article