
ಕಾಂಗ್ರೆಸ್ ಆಡಳಿತದಲ್ಲಿ ಸಂವಿಧಾನದ ತಿದ್ದುಪಡಿ ತಂದು ಅಪಚಾರ ಎಸಗಿದ್ದಾರೆ: ಎನ್. ಮಹೇಶ್
ಮಂಗಳೂರು: ಕಾಂಗ್ರೆಸ್ ಆಡಳಿತ ನಡೆಸಿದ 65 ವರ್ಷಗಳಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅಪಚಾರ ಎಸೆಗಿದ್ದಲ್ಲದೆ, ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೂ ಅ ಪಮಾನ ಮಾಡಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸಂವಿಧಾನಕ್ಕೆ ತಿದ್ದುಪಡಿಸಿ ತಂದು ದಲಿತರಿಗೆ ಗೌರವ ನೀಡಿದೆ ಮಾತ್ರವಲ್ಲ ಅಂಬೇಡ್ಕರ್ ಆಶಯವನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದ್ದಾರೆ.
ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ಆಶ್ರಯದಲ್ಲಿ ಮಂಗಳವಾರ ಇಲ್ಲಿನ ಸ್ಕೌಟ್ ಆಂಡ್ ಗೈಡ್ಸ್ ಭವನದಲ್ಲಿ ನಡೆದ ‘ಸಂವಿಧಾನ ದಿನ-ಸಂವಿಧಾನ ಸನ್ಮಾನ್ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸಿದೆ. ಎಲ್ಲರ ಪ್ರಾತಃಸ್ಮರಣೀಯರಾದ ಅಂಬೇಡ್ಕರ್ ಬಗ್ಗೆ ಎಡ ಪಂಥೀಯ ಹಾಗೂ ಕಾಂಗ್ರೆಸ್ ಧೋರಣೆಯನ್ನು ಭೇದಿಸಿ ಅವರ ನಿಜವಾದ ವ್ಯಕ್ತಿತ್ವವನ್ನು ಅನಾವರಣ ಮಾಡಬೇಕಾಗಿದೆ. ಅಂಬೇಡ್ಕರ್ ಬಗೆಗಿನ ಕಾಂಗ್ರೆಸ್ ಷಡ್ಯಂತರವನ್ನು ಜನತೆಗೆ ಬಿಡಿಸಿ ಹೇಳಬೇಕು ಎಂದರು.
ಸಂವಿಧಾನ ಕರಡು ರಚಿಸಿದ ಅಂಬೇಡ್ಕರ್ ಅವರನ್ನೇ ರಚನಾ ಸಭೆಗೆ ಹೋಗದಂತೆ ತಡೆದದ್ದು ಕಾಂಗ್ರೆಸ್. ಅಂಬೇಡ್ಕರ್ ಲೋಕಸಭೆಯಲ್ಲಿ ಮೊಟ್ಟಮೊದಲ ಬಾರಿಗೆ ಮಂಡಿಸಿದ ಹಿಂದು ಬಿಲ್ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಬಿಲ್ ಪಾಸ್ ಆಗದಂತೆ ನೋಡಿಕೊಂಡದ್ದು ಕಾಂಗ್ರೆಸ್. ಸಂವಿಧಾನಕ್ಕೆ ಇಲ್ಲಿವರೆಗೆ 106 ತಿದ್ದುಪಡಿಯಾಗಿದ್ದು, 75 ಬಾರಿ ಕಾಂಗ್ರೆಸ್, ವಾಜಪೇಯಿ 14, ಮೋದಿ 8 ಬಾರಿ ತಿದ್ದುಪಡಿ ಮಾಡಿದ್ದಾರೆ. ಇದರಲ್ಲಿ ವಾಜಪೇಯಿ ಮತ್ತು ಮೋದಿ ಮಾಡಿದ ತಿದ್ದು ಪಡಿ ಹೊರತುಪಡಿಸಿದರೆ ಬೇರೆ ಯಾವುದೇ ತಿದ್ದುಪಡಿಗಳು ಅಂಬೇಡ್ಕರ್ ಆಶಯದಂತೆ ಇಲ್ಲ. ಅಂಬೇಡ್ಕರ್‌ರ ಶವ ಸಂಸ್ಕಾರಕ್ಕೂ ದೆಹಲಿಯಲ್ಲಿ ಅವಕಾಶ ನೀಡಿದ ಕಾಂಗ್ರೆಸ್, ಅವರ ಹೆಸರಿನಲ್ಲಿ ದಲಿತರನ್ನು ಹಾದಿತಪ್ಪಿಸುವ ಕೆಲಸ ಮಾಡುತ್ತಿದೆ. ಅಂಬೇಡ್ಕರ್‌ರ ಜೀವಿತಾವಧಿಯಲ್ಲಿ ಕಿಂಚಿತ್ತೂ ಗೌರವ ನೀಡದ ಕಾಂಗ್ರೆಸ್‌ಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದರು.
ಅಭಿಯಾನದ ರಾಜ್ಯ ಸಹ ಸಂಚಾಲಕ ವಿಕಾಸ್ ಪುತ್ತೂರು ಮಾತನಾಡಿದರು.
ಕುಲಶೇಖರ ವೀರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಕಚ್ಚೂರು ಮಾಲ್ದಿದೇವಿ ದೇವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು, ಅಭಿಯಾನ ಸಮಿತಿ ಸಹ ಸಂಚಾಲಕರಾದ ಮುರಳಿಕೃಷ್ಣ ಹಸಂತಡ್ಕ, ಕವಿತಾ ಸನಿಲ್ ಇದ್ದರು. ಜಿಲ್ಲಾ ಸಂಚಾಲಕ ಪ್ರೇಮಾನಂದ ಶೆಟ್ಟಿ ಪ್ರಸ್ತಾವಿಕದಲ್ಲಿ, ದೇಶಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಕೊಡುಗೆ ಬಗ್ಗೆ ತಿಳಿವಳಿಕೆ ಮೂಡಿಸಲು ನ.26ರಿಂದ ಜನವರಿ 26ರ ವರೆಗೆ 60 ದಿನಗಳ ಕಾಲ ಬಿಜೆಪಿ ದೇಶಾದ್ಯಂತ ಅಭಿಯಾನ ನಡೆಸುತ್ತಿದೆ. ಸಂವಿಧಾನ ಮಂಡನೆಯಾದ ದಿನದಂದು ಸಂವಿಧಾನ ದಿನಾಚರಣೆ ಆಚರಿಸುತ್ತಿದ್ದು, ಸಂವಿಧಾನ ತಿದ್ದುಪಡಿ ವಿಚಾರದಲ್ಲಿ ಕಾಣಿಸಿರುವ ಟೀಕೆಗಳಿಗೆ ಉತ್ತರಿಸಲು ಈ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದರು.
ವಿನಯನೇತ್ರ ದಡ್ಡಲಕಾಡ್ ನಿರೂಪಿಸಿದರು.